ಮುಧೋಳದ ದಾನಮ್ಮದೇವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಪ್ರೊ. ಎಂ.ಎಸ್. ಲಂಗೋಟಿ, ಪ್ರೊ. ಎಸ್.ಕೆ. ಸಾರವಾಡ, ಪ್ರೊ. ಎಲ್.ಬಿ. ಹನುಮರ, ಪ್ರೊ. ಮಲ್ಲಿಕಾರ್ಜುನ ಇತರರಿದ್ದರು. 
ಬಾಗಲಕೋಟೆ

ಕಠಿಣ ಪರಿಶ್ರಮದಿಂದ ಯಶಸ್ಸು ಖಚಿತ

ಪ್ರಮುಖ ಮುಖ್ಯಾಂಶಗಳು

  • ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅಭಿಮತ
  • ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ

ಮುಧೋಳ : ಯಾವುದೇ ಪದವಿ ಪಡೆದರೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಯುವ ಜನರಿಗೆ ಉತ್ತಮ ಅವಕಾಶಗಳಿವೆ. ನಿಗದಿತ ಗುರಿಯೊಂದಿಗೆ ಕಠಿಣ ಪರಿಶ್ರಮ ಮತ್ತು ನಿರಂತರ ಅಧ್ಯಯನ ನಡೆಸಿದರೆ ಯಶಸ್ಸು ಖಚಿತ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.

ನಗರದ ಬವಿವ ಸಂಘದ ಶ್ರೀ ದಾನಮ್ಮದೇವಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿಕೊಂಡು ಶ್ರಮಿಸಬೇಕು. ಉತ್ತಮ ಶಿಕ್ಷಣದ ಮೂಲಕ ತಂದೆ-ತಾಯಿಗಳ ಕನಸನ್ನು ನನಸು ಮಾಡುವ ಜತೆಗೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.
ಪ್ರಾಚಾರ್ಯ ಡಾ. ಎಂ.ಎಂ. ಹಿರೇಮಠ ಮಾತನಾಡಿ, ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ಸೌಲಭ್ಯ ಹಾಗೂ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು. ಪಠ್ಯ ಶಿಕ್ಷಣದ ಜತೆಗೆ ಯುವಜನೋತ್ಸವ ಸೇರಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಹಾವಿದ್ಯಾಲಯಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಪ್ರೊ. ಎಂ.ಎಸ್. ಲಂಗೋಟಿ, ಪ್ರೊ. ಎಸ್.ಕೆ. ಸಾರವಾಡ, ಪ್ರೊ. ಎಲ್.ಬಿ. ಹನುಮರ, ಪ್ರೊ. ಮಲ್ಲಿಕಾರ್ಜುನ ಸೇರಿ ಇತರರು ಉಪಸ್ಥಿತರಿದ್ದರು.