ಮುಧೋಳ ತಾಲೂಕಿನ ಮುಗಳಖೋಡ ಸರ್ಕಾರಿ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಪ್ರಕರಣದ ಕುರಿತು ಸಹಾಯಕ ಆಯುಕ್ತೆ ಶ್ವೇತಾ ಬೀಡಿಕರ ಪರಿಶೀಲನೆ ನಡೆಸಿದರು. ಡಿಡಿಪಿಐ ಅಜೀತ ಮನ್ನಿಕೇರಿ, ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ್ ಹಾಗೂ ಇತರ ಅಧಿಕಾರಿಗಳು ಇದ್ದರು.
- ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ್ ಮಾಹಿತಿ
- ಸಹಾಯಕ ಆಯುಕ್ತೆ ಶ್ವೇತಾ ಬೀಡಿಕರ ಪರಿಶೀಲನೆ
ಮುಧೋಳ: ತಾಲೂಕಿನ ಮುಗಳಖೋಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬಿಸಿಯೂಟ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದ 21 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪೈಕಿ ಮೂವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಹಾಗೂ 18 ಮಂದಿಯನ್ನು ಮುಧೋಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯಕೀಯ ಚಿಕಿತ್ಸೆ ಬಳಿಕ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ್ ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಹಾಯಕ ಆಯುಕ್ತೆ ಶ್ವೇತಾ ಬೀಡಿಕರ, ಡಿಡಿಪಿಐ ಅಜೀತ ಮನ್ನಿಕೇರಿ, ಡಿಎಚ್‌ಒ ಡಾ. ಮಂಜುನಾಥ, ಕಂದಾಯ ಇಲಾಖೆಯ ಅಧಿಕಾರಿ ಪ್ರಕಾಶ ಕುಂದರಗಿ, ಬಿಇಒ ಎಸ್.ಎಂ. ಮುಲ್ಲಾ, ಇಒ ರಾಘವೇಂದ್ರ ಕಳ್ಳಿಮನಿ ಸೇರಿ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಘಟನೆಯ ಕುರಿತು ಪ್ರಾಥಮಿಕ ತನಿಖೆ ಪೂರ್ಣಗೊಂಡಿದ್ದು, ಸಮಿತಿಯ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
"
ಮುಗಳಖೋಡ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ ಕುರಿತು ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಿದೆ. ಅಸ್ವಸ್ಥಗೊಂಡಿದ್ದ ಎಲ್ಲ 21 ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದು, ಆರೋಗ್ಯ ಸ್ಥಿರವಾಗಿದೆ.
— | ಡಾ. ಚಿಕ್ಕಪ್ಪ ನಾಯಕ್, ತಹಸೀಲ್ದಾರ್, ಮುಧೋಳ