ಬಾಗಲಕೋಟೆ ಬಸವೇಶ್ವರ ವಾಣಿಜ್ಯ ಕಾಲೇಜಿನಲ್ಲಿ ನಡೆದ ಉದ್ಯೋಗಾರ್ಹತಾ ಕೌಶಲ್ಯ ತರಬೇತಿಯಲ್ಲಿ ಪ್ರಾಚಾರ್ಯ ಜಗನ್ನಾಥ ಚವ್ಹಾಣ ಮಾತನಾಡಿದರು.  
ಬಾಗಲಕೋಟೆ

ವಿದ್ಯಾರ್ಥಿಗಳು ಕೌಶಲ್ಯ ವೃದ್ಧಿಸಿಕೊಳ್ಳಬೇಕು

ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ. ಉದ್ಯೋಗ ಪಡೆಯಲು ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ, ಸಂದರ್ಶನ ಕೌಶಲ್ಯ ಹಾಗೂ ಉದ್ಯೋಗಾರ್ಹತಾ ಕೌಶಲ್ಯಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಜಗನ್ನಾಥ ಚವ್ಹಾಣ ಹೇಳಿದರು.
ನಗರದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿಬಿಎ ಹಾಗೂ ಮಹೀಂದ್ರ ಮತ್ತು ನಾಂದಿ ಫೌಂಡೇಶನ್ ಸಹಯೋಗದಲ್ಲಿ ಸೋಮವಾರದಿಂದ ಆರಂಭವಾದ ಆರು ದಿನಗಳ ಉದ್ಯೋಗಾರ್ಹತಾ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತರಬೇತಿಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ತರಬೇತುದಾರ ದಾಮೋದರನ್, ಇಂದಿನ ಉದ್ಯಮ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಈ ತರಬೇತಿಯ ಮೂಲಕ ಉದ್ಯೋಗಾರ್ಹತಾ ಕೌಶಲ್ಯ, ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ, ಸಂದರ್ಶನ ಕೌಶಲ್ಯ ಹಾಗೂ ಉದ್ಯಮ ಕ್ಷೇತ್ರದ ನಿರೀಕ್ಷೆಗಳ ಕುರಿತು ಪ್ರಾಯೋಗಿಕ ಮತ್ತು ಉಪಯುಕ್ತ ಮಾಹಿತಿಯನ್ನು ನೀಡಲಾಗುವುದು. ಇದು ವಿದ್ಯಾರ್ಥಿಗಳನ್ನು ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕೆ ಸಜ್ಜುಗೊಳಿಸುವ ಮಹತ್ವದ ವೇದಿಕೆಯಾಗಿದೆ ಎಂದು ತಿಳಿಸಿದರು.
ಐಕ್ಯೂಎಸಿ ಸಂಯೋಜಕಿ ಗಿರಿಜಾ ನಾವದಗಿ, ಬಿಬಿಎ ವಿಭಾಗದ ಸಂಯೋಜಕ ಡಾ.ಎಂ. ನಂಜುAಡಸ್ವಾಮಿ, ಸಂಪತ್ ಹಿಟ್ಟಿನಮಠ ಉಪಸ್ಥಿತರಿದ್ದರು. ತರಬೇತಿಯಲ್ಲಿ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.