ತೇರದಾಳ ತಾಲೂಕಿನ ಹನಗಂಡಿ ಗ್ರಾಮದಲ್ಲಿ ಪ್ರತ್ಯೇಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ವಿಜಯಕುಮಾರ ಕಡಕೋಳ ಸೇರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. 
ಬಾಗಲಕೋಟೆ

ಬಸ್ ಸೌಲಭ್ಯಕ್ಕೆ ವಿದ್ಯಾರ್ಥಿಗಳ ಆಗ್ರಹ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ವಿಜಯಕುಮಾರ ಕಡಕೋಳ ಸ್ಥಳಕ್ಕೆ ಭೇಟಿ
  • ಅಧಿಕಾರಿಗಳ ಭರವಸೆ
  • ಹೆದ್ದಾರಿ ತಡೆದು ಪ್ರತಿಭಟನೆ
ತೇರದಾಳ: ಕಾಲೇಜ್ ವಿದ್ಯಾರ್ಥಿಗಳಿಗಾಗಿ ಹನಗಂಡಿ ಗ್ರಾಮದಿಂದಲೇ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಬುಧವಾರ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಹನಗಂಡಿ ಗ್ರಾಮದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ರಬಕವಿ, ಬನಹಟ್ಟಿ ಸೇರಿ ವಿವಿಧ ಕಾಲೇಜ್‌ಗಳಿಗೆ ತೆರಳುತ್ತಾರೆ. ಆದರೆ ಬಸ್‌ಗಳು ತೇರದಾಳದಿಂದಲೇ ತುಂಬಿಕೊಂಡು ಬರುವುದರಿಂದ ಹನಗಂಡಿಯಲ್ಲಿ ವಿದ್ಯಾರ್ಥಿಗಳಿಗೆ ಹತ್ತಲು ಅವಕಾಶ ಸಿಗುತ್ತಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸರ್ಕಾರ ಸಾರಿಗೆ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಪಾಲಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಪಿಎಸ್‌ಐ ಎಸ್.ಕೆ. ಸಿಂಗನ್ನವರ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಜುಲೈ 20ರಿಂದ ಹನಗಂಡಿ ಗ್ರಾಮದಿಂದ ಬನಹಟ್ಟಿಗೆ ಪ್ರತ್ಯೇಕ ಬಸ್ ಸಂಚಾರ ಆರಂಭಿಸಲು ಜಮಖಂಡಿ ಡಿಪೋ ವ್ಯವಸ್ಥಾಪಕರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಅಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಆದರೆ ಜುಲೈ 20ರಿಂದ ಪ್ರತ್ಯೇಕ ಬಸ್ ಸೇವೆ ಆರಂಭವಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.