ಯಡಹಳ್ಳಿಯಲ್ಲಿ ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿ ತಡೆ ನಡೆಸಿದ ಸಂಬಂಧ ಸಂಚಾರ ಸಿಕ್ಕು ಉಂಟಾಗಿರುವುದು. 
ಬಾಗಲಕೋಟೆ

ಯಡಹಳ್ಳಿ ಬಳಿ ವಿದ್ಯಾರ್ಥಿಗಳಿಂದ ರಸ್ತೆ ತಡೆ

ಪ್ರಮುಖ ಮುಖ್ಯಾಂಶಗಳು

  • ಸಂಚಾರಿ ಸಿಕ್ಕಿನಿಂದ ಸಾಲುಗಟ್ಟಿದ ವಾಹನಗಳು
  • ಪರದಾಡಿದ ಜನತೆ
  • ವಿಜಯಪುರ-ಹುಬ್ಬಳ್ಳಿ ರಾಜ್ಯ ಹೆದ್ದಾರಿ (218) ಯಡಹಳ್ಳಿ ಗ್ರಾಮದ ಬಳಿ ಬಸ್ ನಿಲುಗಡೆ ಮಾಡದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.
ಕಲಾದಗಿ :

ಯಡಹಳ್ಳಿ ಗ್ರಾಮದ ಕ್ರಾಸ್ ಬಳಿ ಬಸ್ ನಿಲುಗಡೆ ಮಾಡಲು ಆಗ್ರಹಿಸಿ ವಿದ್ಯಾರ್ಥಿಗಳು ಏಕಾಏಕಿ ಪ್ರತಿಭಟನೆ ನಡೆಸಿದ ಪರಿಣಾಮ ಗದ್ದನಕೇರಿ ಕ್ರಾಸ್- ವಿಜಯಪುರ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಕೆಲ ಕಾಲ ಸಂಚಾರಿ ಸಿಕ್ಕು ಉಂಟಾಗಿ ವಾಹನ ಸವಾರರು ಪರದಾಡಿದರು.

ವಿಜಯಪುರ-ಹುಬ್ಬಳ್ಳಿ ರಾಜ್ಯ ಹೆದ್ದಾರಿ (218) ಯಡಹಳ್ಳಿ ಗ್ರಾಮದ ಬಳಿ ಬಸ್ ನಿಲುಗಡೆ ಮಾಡದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆಯೆಂದು ಅಲ್ಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದರು.

ವಿದ್ಯಾರ್ಥಿಗಳ ಅಳಲು

ಮೂರ‌್ನಾಲ್ಕು ಕಿಲೋ ಮೀಟರ್ ದೂರದ ಗದ್ದನಕೇರಿ ಇಲ್ಲವೆ ಅನಗವಾಡಿವರೆಗೆ ತೆರಳಿ ಬಸ್ ಏರಬೇಕಾದ ಪರಿಸ್ಥಿತಿ ಇದ್ದು, ಅಧಿಕಾರಿಗಳು ನಮ್ಮ ಸಮಸ್ಯೆ ಕಡೆ ಗಮನ ಹರಿಸಿ ಯಡಹಳ್ಳಿ ಕ್ರಾಸ್ ಬಳಿ ಬಸ್ ನಿಲುಗಡೆ ಮಾಡಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಯೋವೃದ್ಧರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಲಾಯಿತು.
ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಅಧಿಕಾಲ ಸಂಚಾರಿ ಸಿಕ್ಕು ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು. ಅಂತಿಮವಾಗಿ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.