ತೇರದಾಳ ಪಟ್ಟಣದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಸುದ್ದಿಗೋಷ್ಟಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಡಾ. ಪುಷ್ಪದಂತ ದಾನಿಗೊಂಡ, ಡಿನ್ ವಿಶ್ವನಾಥ ರೆಡ್ಡಿ, ಪ್ರಾಚಾರ್ಯ ಸಂದೀಪ ಸಮಸೋಲೆ ಇತರರಿದ್ದರು.
- ವ್ಯವಸ್ಥಾಪಕ ನಿರ್ದೇಶಕ ಡಾ. ಪುಷ್ಪದಂತ ದಾನಿಗೊಂಡ ಮಾಹಿತಿ
- 338 ಶಾಲೆಗಳ 5,901 ಕ್ರೀಡಾಪಟುಗಳು ಭಾಗಿ
ತೇರದಾಳ: ಪಟ್ಟಣದ ಪ್ರತಿಷ್ಠಿತ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜು. 24ರಿಂದ 26ರವರೆಗೆ ಸಿಬಿಎಸ್‌ಇ ರಾಜ್ಯಮಟ್ಟದ (ಕ್ಲಸ್ಟರ್-8) ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳ 338 ಶಾಲೆಗಳ 5,901 ವಿದ್ಯಾರ್ಥಿ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಪುಷ್ಪದಂತ ದಾನಿಗೊಂಡ ತಿಳಿಸಿದರು.
ಸ್ಥಳೀಯ ದಾನಿಗೊಂಡ ಸಂಸ್ಥೆಯಲ್ಲಿ ಸೋಮವಾರ ಮಾತನಾಡಿದ ಅವರು, ಬೆಂಗಳೂರಿನ 150 ಶಾಲೆಗಳು ಸೇರಿ ಒಟ್ಟು 338 ಶಾಲೆಗಳ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 4,215 ಬಾಲಕರು ಹಾಗೂ 1,686 ಬಾಲಕಿಯರು ಸೇರಿದ್ದಾರೆಂದರು.
24ರಂದು ಬೆಳಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೊಳಿಕರ ಉದ್ಘಾಟಿಸಲಿದ್ದು, ಸಿಬಿಎಸ್‌ಇ ಕೇಂದ್ರದ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಪಂದ್ಯಾವಳಿಗಾಗಿ 10 ಮೈದಾನಗಳನ್ನು ಸಜ್ಜುಗೊಳಿಸಲಾಗಿದ್ದು, ಮಳೆಯ ಸಂದರ್ಭದಲ್ಲೂ ಪಂದ್ಯಗಳಗೆ ಅಡಚಣೆಯಾಗದಂತೆ ಮ್ಯಾಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ದಿನಗಳಲ್ಲಿ ಒಟ್ಟು 465 ಪಂದ್ಯಗಳು ನಡೆಯಲಿದ್ದು, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳ 85 ಪರಿಣಿತ ನಿರ್ಣಾಯಕರು ಪಂದ್ಯಗಳನ್ನು ನಿರ್ವಹಿಸಲಿದ್ದಾರೆ. ಅಂತಾರಾಷ್ಟ್ರೀವಾಲಿಬಾಲ್ ನಿಯಮಾವಳಿಯಂತೆ ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಸಿಬಿಎಸ್‌ಇಯ ಇಬ್ಬರು ವೀಕ್ಷಕ ಅಧಿಕಾರಿಗಳು ಪಂದ್ಯಾವಳಿಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಗಳು ರಾಷ್ಟçಮಟ್ಟದ ಸಿಬಿಎಸ್‌ಇ ವಾಲಿಬಾಲ್ ಸ್ಪರ್ಧೆಗೆ ಅರ್ಹತೆ ಪಡೆಯಲಿವೆ. ಸಾಮಾನ್ಯವಾಗಿ ಮಹಾನಗರಗಳಲ್ಲಿ ಮಾತ್ರ ನಡೆಯುವ ಇಂತಹ ಪ್ರತಿಷ್ಠಿತ ಕ್ರೀಡಾಕೂಟ ಮೊದಲ ಬಾರಿಗೆ ತೇರದಾಳದಲ್ಲಿ ಆಯೋಜನೆಯಾಗುತ್ತಿರುವುದು ಈ ಭಾಗದ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲಾಗಿದೆ ಎಂದು ಡಾ. ದಾನಿಗೊಂಡ ಹೇಳಿದರು.
ಸಂಸ್ಥೆ ಡೀನ್ ಡಾ. ವಿಶ್ವನಾಥ ರೆಡ್ಡಿ, ಪ್ರಾಚಾರ್ಯ ಸಂದೀಪ ಸಮಶೋಲೆ, ಆಡಳಿತಾಽಕಾರಿ ರಾಜು ಪರೀಟ, ಶಾಂತಿನಾಥ ಪರಮಗೊಂಡ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.