ಹುನಗುಂದ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಕರ್ನಾಟಕ ಸಂಘನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಶಿಂತ್ರೆ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ರಮೇಶ ಮುಧೋಳ, ಜಿಲ್ಲಾ ಉಪಾಧ್ಯಕ್ಷ ಮುತ್ತಣ್ಣ ಕಬ್ಬಿನಚ, ತಾಲೂಕಾಧ್ಯಕ್ಷ ವೀರುಪಾಕ್ಷಿ ಸೂಡಿ, ಗೌರವಾಧ್ಯಕ್ಷ ರಾಚಪ್ಪ ಕಾಜಗಾರ, ಮಲ್ಲಿಕಾರ್ಜುನ ಚೂರಿ ಇದ್ದರು. 
ಬಾಗಲಕೋಟೆ

31ರಂದು ರಾಜ್ಯಮಟ್ಟದ ಅಯ್ಯಪ್ಪ ಮಹಾಸಂಗಮ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಶಿಂತ್ರೆ ಹೇಳಿಕೆ
  • ಕೂಡಲ ಸಂಗಮದಲ್ಲಿ ಆಯೋಜನೆ
  • ವಿವಿಧ ಧಾರ್ಮಿಕ ಕೈಂಕರ್ಯ
ಹುನಗುಂದ: ಅಧಿಕಮಾಸದ ನಿಮಿತ್ತ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಕರ್ನಾಟಕ ಸಂಘನೆಯ 18 ವರ್ಷಾಚರಣೆ ಅಂಗವಾಗಿ ರಾಜ್ಯಮಟ್ಟದ ಅಯ್ಯಪ್ಪ ಮಹಾಸಂಗಮ ತ್ರಿವೇಣಿ ಸಂಗಮದ ಮೇ 31ರಂದು ಕೂಡಲಸಂಗಮ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಶಿಂತ್ರೆ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಗಂಗಾಆರತಿ, 108 ಗುರುಸ್ವಾಮಿ ದಂಪತಿಗಳಿಂದ ಲಕ್ಷಾರ್ಚನೆ 108 ಪೂರ್ಣಕುಂಭ ಮೆರವಣಿಗೆ ಮಹಾಪ್ರಸಾದ ಹಾಗೂ ಅಯ್ಯಪ್ಪ ಧರ್ಮ ಜಾಗೃತಿ ಸಭೆಯು ನಡೆಯಲಿದೆ. ಈ ಸಂಸ್ಥೆಯು ಕೇರಳದ ಪಟ್ಟಣ ತಿಟ್ಟಣತಿಟ್ಟಂನಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸಂಘಟನೆ 2008ರಲ್ಲಿ ಸ್ಥಾಪಿತವಾಗಿ ರಾಷ್ಟ್ರೀಯ ಸಂಸ್ಥೆಯಾಗಿ ಬೆಳೆದಿದೆ ಎಂದು ತಿಳಿಸಿದರು.
ನದಿ ಪರಿಸರ ಸ್ವಚ್ಚತೆ ಸೇರಿ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮ ನಿರಂತರವಾಗಿ ಮಾಡುತ್ತಿದೆ. ಅಯ್ಯಪ್ಪ ಸೇವಾ ಕೇಂದ್ರಗಳ ಮೂಲಕ ಶಬರಿಮಲೈ ಯಾತ್ರೆಗೆ ತೆರಳುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ರಾಜ್ಯದ ಯಾವುದೇ ಸ್ಥಳದಿಂದ ಯಾತ್ರೆ ಕೈಗೊಂಡರು ದಾರಿಯುದ್ದಕ್ಕೂ ತಾಲೂಕು ಜಿಲ್ಲಾ ಅಯ್ಯಪ್ಪ ಸೇವಾ ಕೇಂದ್ರಗಳಲ್ಲಿ ಉಚಿತ ತಾತ್ಕಾಲಿಕ ವಸತಿ, ಅನ್ನಪ್ರಸಾದ, ಪೂಜೆಗೆ ವ್ಯವಸ್ಥೆ ಕಲ್ಪಿಸುತ್ತದೆ. ಕಳೆದ 2025-26ನೇ ಸಾಲಿನಲ್ಲಿ 74 ಕೇಂದ್ರಗಳ ಮೂಲಕ 7.66.465 ಅಯ್ಯಪ್ಪ ಯಾತ್ರಾರ್ಥಿಗಳಿಗೆ ರಾಜ್ಯ ಅಯ್ಯಪ್ಪ ಸೇವಾ ಕೇಂದ್ರ ಅನ್ನ ಪ್ರಸಾದ ಉಣಬಡಿಸಿದೆ ಎಂದು ವಿವರಿಸಿದರು.
ಕೂಡಲಸಂಗಮದಲ್ಲಿ ಬೆಳಗಿನ ಜಾವ 4 ಗಂಟೆಗೆ ಗಣಪತಿ ಹೋಮ, 6 ಗಂಟೆಗೆ ಅಯ್ಯಪ್ಪಸ್ವಾಮಿಗೆ 108 ಗುರು ಸ್ವಾಮಿದಂಪತಿಯಗಳಿಂದ ಲಕ್ಷ ಅರ್ಚನೆ, 10 ಗಂಟೆಗೆ ಅಯ್ಯಪ್ಪ ಧರ್ಮ ಜಾಗೃತಿ ಸಭೆ, ಐದು ಸಾವಿರ ಭಕ್ತರಿಗೆ ಪ್ರಸಾವ ವ್ಯವಸ್ಥೆ, ತ್ರಿವೇಣಿ ಸಂಗಮ ಸ್ವಚ್ಚತೆ ಕಾರ್ಯಕ್ರಮ, ಸಂಜೆ ತ್ರಿವೇಣಿ ಸಂಗಮಕ್ಕೆ ಗಂಗಾ ಆರತಿ ಮತ್ತು ರಾತ್ರಿ ಹರಿವರಾಸನಂ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಂಘಟನೆ ರಾಜ್ಯ ಉಪಾಧ್ಯಕ್ಷ ರಮೇಶ ಮುಧೋಳ, ಜಿಲ್ಲಾ ಉಪಾಧ್ಯಕ್ಷ ಮುತ್ತಣ್ಣ ಕಬ್ಬಿನಚ, ತಾಲೂಕಾಧ್ಯಕ್ಷ ವೀರುಪಾಕ್ಷಿ ಸೂಡಿ, ಗೌರವಾಧ್ಯಕ್ಷ ರಾಚಪ್ಪ ಕಾಜಗಾರ, ಮಲ್ಲಿಕಾರ್ಜುನ ಚೂರಿ, ಸಂಜಯ ಜಾಲವಾದಿ, ಅಖಂಡೇಶ್ವರ ಪತ್ತಾರ, ಮುತ್ತಣ್ಣ ಗುಂಜಾಲಿ ಇದ್ದರು.