ಮುಧೋಳದಲ್ಲಿ ಎಸ್‌ಎಸ್‌ಎಲ್‌ಸಿ ಗಣಿತ ಪ್ರಶ್ನೆಪತ್ರಿಕೆ ಗೊಂದಲ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪಿ.ಎಲ್. ಬಗಲಿ ಅವರು ಬಿಇಒ ಸಮೀರ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಸಿ.ಎಸ್. ಶೆಟ್ಟರ್, ಪ್ರಕಾಶ ಗಾಡಗೂಳಿ, ಶುಭಾ ಕಟ್ಟಿ, ಐ.ಎಚ್. ಗಸ್ತಿ, ಪ್ರಕಾಶ್ ಯರಗಟ್ಟಿ ಇತರರಿದ್ದರು. 
ಬಾಗಲಕೋಟೆ

ಎಸ್‌ಎಸ್‌ಎಲ್‌ಸಿ ಗಣಿತ ಪ್ರಶ್ನೆಪತ್ರಿಕೆ ಗೊಂದಲ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಕಪಾಂಕ ನೀಡಲು ಶಿಕ್ಷಕರ ಸಂಘದ ಆಗ್ರಹ
  • ಕೃಪಾಂಕ ನೀಡಲು ಮನವಿ
  • ಪಠ್ಯಪುಸ್ತಕದಲ್ಲಿಲ್ಲದ 16 ಅಂಕಗಳ ಅನ್ವಯಿಕ ಪ್ರಶ್ನೆಗಳ ಬಳಕೆ
ಮುಧೋಳ : ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ತಾಂತ್ರಿಕ ದೋಷಗಳು ಹಾಗೂ ಅತೀ ಕ್ಲಿಷ್ಟಕರ ಪ್ರಶ್ನೆಗಳು ಇದ್ದುದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕ ಆತಂಕ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳ ಹಿತದಷ್ಟಿಯಿಂದ ಮೌಲ್ಯಮಾಪನ ಸಂದರ್ಭದಲ್ಲಿ ಕಪಾಂಕ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಸಂಬಂಧ ಬುಧವಾರ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಅವರ ಮೂಲಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಪಿ.ಎಲ್. ಬಗಲಿ ಮಾತನಾಡಿ, ಪ್ರಶ್ನೆಪತ್ರಿಕೆಯಲ್ಲಿ ಅತಿಯಾದ ವಾಟರ್‌ಮಾರ್ಕ್ ಇರುವುದರಿಂದ ಪ್ರಶ್ನೆಗಳು ಹಾಗೂ ಅಂಕಿ-ಅಂಶಗಳನ್ನು ಸ್ಪಷ್ಟವಾಗಿ ಓದಲು ವಿದ್ಯಾರ್ಥಿಗಳಿಗೆ ತೊಂದರೆಯಾಯಿತು ಎಂದು ತಿಳಿಸಿದರು.
ಇದಲ್ಲದೆ ಸುಮಾರು 21 ಅಂಕಗಳ ಪ್ರಶ್ನೆಗಳು ಪಠ್ಯಪುಸ್ತಕ ಹಾಗೂ ಎಲ್‌ಬಿಎ ಮಟ್ಟಕ್ಕಿಂತ ಹೆಚ್ಚು ಕಠಿಣವಾಗಿದ್ದರೆ, ಸುಮಾರು 16 ಅಂಕಗಳ ಅನ್ವಯಿಕ ಪ್ರಶ್ನೆಗಳು ಪಠ್ಯಪುಸ್ತಕದಲ್ಲಿಲ್ಲದ ಮಾದರಿಯಲ್ಲಿ ಬಂದಿದ್ದವು ಎಂದು ಅವರು ದೂರಿದರು. ಇದರಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಮೌಲ್ಯಮಾಪನದಲ್ಲಿ ಸಹಾನುಭೂತಿ ತೋರಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಘದ ಉಪಾಧ್ಯಕ್ಷ ಎಲ್.ಡಿ. ಮಮದಾಪುರ ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಿಂದಿ ವಿಷಯದ ಅಂಕಗಳನ್ನು ಪರಿಗಣಿಸುವ ಕುರಿತು ಕೊನೆಯ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಈ ಕುರಿತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಮಗ್ರ ಚರ್ಚೆ ನಡೆಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಸಿ.ಎಸ್. ಶೆಟ್ಟರ, ಕಾರ್ಯದರ್ಶಿ ಪ್ರಕಾಶ ಗಾಡಗೂಳಿ, ಗಣಿತ ವಿಷಯ ಸಮೂಹದ ಅಧ್ಯಕ್ಷೆ ಶುಭಾ ಕಟ್ಟಿ, ಐ.ಎಚ್. ಗಸ್ತಿ, ಪ್ರಕಾಶ ಯರಗಟ್ಟಿ, ಸುಭಾಷ ರಾಥೋಡ್, ಸಿ.ಎಸ್. ಸೊನ್ನದ, ರಾಜು ಮರಗಳೆ, ಎಸ್.ವೈ. ಹುಂಡೇಕಾರ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಪ್ರತಿಕ್ರಿಯಿಸಿ, ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
"

ಗಣಿತ ಪ್ರಶ್ನೆ ಪತ್ರಿಕೆಯ ಕ್ಲಿಷ್ಟತೆಯಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಪರೀಕ್ಷಾ ಮಂಡಳಿ ಮೌಲ್ಯಮಾಪನದಲ್ಲಿ ಕಪಾಂಕ ನೀಡುವ ಮೂಲಕ ವಿದ್ಯಾರ್ಥಿಗಳ ನೆರವಿಗೆ ಬರಬೇಕು.
-ಪಿ.ಎಲ್. ಬಗಲಿ, ತಾಲೂಕು ಅಧ್ಯಕ್ಷರು