ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆಗಳಿಗೆ ಅನುಮೋದನೆ ಮತ್ತು ಅನುದಾನ ನೀಡುವಂತೆ ಬೆಂಗಳೂರಲ್ಲಿ ಸಿಎಂ ಡಿ.ಕೆ.ಶಿವಕುಮಾರ ಅವರನ್ನು ಶಾಸಕ ಉಮೇಶ ಮೇಟಿ ಭೇಟಿ ಮಾಡಿ ಮನವಿ ಸಲ್ಲಿಸಿ ಚರ್ಚಿಸಿದರು. ಹೊಳೆಬಸು ಶೆಟ್ಟರ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಇದ್ದರು.
- ಸಿಎಂ ಡಿಕೆಶಿಗೆ ಶಾಸಕ ಮೇಟಿ ಮನವಿ
- ಪರಿಶೀಲನೆಗೆ ಮುಖ್ಯಮಂತ್ರಿ ಸೂಚನೆ
- ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿಮ್ಮಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ.
ಬಾಗಲಕೋಟೆ: ನವನಗರ ಯುನಿಟ್-3ರಲ್ಲಿ ಅಂದಾಜು 200 ಎಕರೆ ಪ್ರದೇಶದಲ್ಲಿ ಎಲ್ಲ ವ್ಯಾಪಾರಸ್ಥರನ್ನು ಒಂದೇ ಸಂಕೀರ್ಣದಲ್ಲಿ ಒಗ್ಗೂಡಿಸುವ ವಾಣಿಜ್ಯ ಮಾರುಕಟ್ಟೆ ನಿರ್ಮಿಸಲು ವಿಶೇಷ ಸಭೆ ಕರೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬಾಗಲಕೋಟೆ ಶಾಸಕ ಉಮೇಶ ಮೇಟಿ ಮನವಿ ಮಾಡಿದರು.
ಬೆಂಗಳೂರಲ್ಲಿ ಸಿಎಂ ಕಚೇರಿಯಲ್ಲಿ ಡಿಕೆಶಿ ಅವರನ್ನು ಶುಕ್ರವಾರ ಶಾಸಕರ ನೇತೃತ್ವದಲ್ಲಿ ಬಾಗಲಕೋಟೆ ಕ್ಷೇತ್ರದ ಮುಖಂಡರು, ಆಲಮಟ್ಟಿ ಜಲಾಶಯದ ಹಿನ್ನೀರಿಗೆ ಮುಳುಗಡೆಯಾಗಿ ಚದುರಿ ಹೋಗಿರುವ ನಗರದ ವಾಣಿಜ್ಯ ಚಟುವಟಿಕೆ ಕುಂಠಿತವಾಗಿದ್ದು, ವ್ಯಾಪಾರಸ್ಥರನ್ನು ಒಂದೇ ಸೂರಿನಡಿ ತರಲು ಈ ಯೋಜನೆ ಅಗತ್ಯವಾಗಿದೆ ಎಂದು ಸಿಎಂಗೆ ತಿಳಿಸಿದರು. ಈ ಬಗ್ಗೆ ಪರಿಶೀಲಿಸಲು ಕೆಬಿಜಿಎನ್‌ಎಲ್ ಎಂಡಿಗೆ ಸೂಚಿಸುವುದಾಗಿ ಸಿಎಂ ಶಾಸಕರಿಗೆ ತಿಳಿಸಿದರು.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಾಗಲಕೋಟೆ ಹಳೇನಗರ, ನವನಗರ, ಕಮತಗಿ, ಅಮೀನಗಡ ಹಾಗೂ ಶಿರೂರ ನಗರಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳನ್ನು ಹಾಗೂ ಬಾಗಲಕೋಟೆ ಹಳೇನಗರ, ನವನಗರ, ಅಮೀನಗಡ, ಕಮತಗಿ, ಶಿರೂರ ಮತ್ತು ಬೇವಿನಮಟ್ಟಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವಂತೆ ಕೋರಿದರು.
ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿಮ್ಮಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ನವನಗರದ ಅಂಜುಮನ್ ಇಸ್ಲಾಂ ಸಮಿತಿಯ ಶಾಲಾ ಆವರಣದಲ್ಲಿ ರಸ್ತೆ ನಿರ್ಮಾಣ, ಅಮೀನಗಡ ಉರ್ದು ಶಾಲೆಯಲ್ಲಿ ಕೊಠಡಿಗಳ ನಿರ್ಮಾಣ, ಹೂವಿನಕೊಳ್ಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಹಾಗೂ ಸುತಗುಂಡಾರ ಪ್ರಾಥಮಿಕ ಶಾಲೆಯ ಮೇಲ್ದಾವಣಿ ದುರಸ್ತಿಗೆ ಒಟ್ಟು ರೂ. 1.80 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಇದೇ ವೇಳೆ, ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ವಿವಿಧ ರಸ್ತೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿದರು. ಅಮೀನಗಡದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ ರೂ. 5 ಲಕ್ಷ ಪರಿಹಾರವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.
ಮಾಜಿ ಸಚಿವ ಅಜಯಕುಮಾರ ಸರನಾಯಕ, ಕಾಂಗ್ರೆಸ್ ಮುಖಂಡ ಹೊಳೆಬಸು ಶೆಟ್ಟರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾಯಕ್ಕ ಮೇಟಿ ಸೇರಿ ಮತ್ತಿತರರು ಇದ್ದರು.
"
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಕೆಲ ಯೋಜನೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಯೋಜನೆಗಳಿಗೆ ಶೀಘ್ರದಲ್ಲೇ ಅನುಮೋದನೆ ಹಾಗೂ ಅನುದಾನ ದೊರೆಯುವ ವಿಶ್ವಾಸವಿದೆ.
-ಉಮೇಶ ಮೇಟಿ, ಶಾಸಕರು, ಬಾಗಲಕೋಟೆ.