ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ ಅತೀ ಮುಖ್ಯವಾಗಿ ಆಗಬೇಕಿರುವ ಕೆಲಸಗಳ ಪಟ್ಟಿಮಾಡಿ ಮುಖ್ಯ ಇಂಜಿನಿಯರ್‌ಗೆ ಮಂಗಳವಾರ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮನವಿ ಸಲ್ಲಿಸಿದರು. ಪಕ್ಷದ ಮುಖಂಡರಾದ ರಾಜು ಮನ್ನಿಕೇರಿ, ನಗರಸಭೆ ಮಾಜಿ ಸದಸ್ಯ ದಂಡಿನ, ರೈಲ್ವೆ ಹೋರಾಟಗಾರ ಕುತುಬುದ್ದೀನ್ ಖಾಜಿ ಇದ್ದರು. 
ಬಾಗಲಕೋಟೆ

ಜನತೆಯ ಪ್ರಮುಖ ಸಮಸ್ಯೆಯನ್ನು ಬಗೆಹರಿಸಿ

ಪ್ರಮುಖ ಮುಖ್ಯಾಂಶಗಳು

  • ಬಿಟಿಡಿಎ ಸಿಇಗೆ ನಂಜಯ್ಯನಮಠ ಆಗ್ರಹ
  • ಬಿಟಿಡಿಎ ಮುಖ್ಯ ಇಂಜಿನಿಯರ್‌ಗೆ ಮನವಿ
  • ಮುಳುಗಡೆ ಸಂತ್ರಸ್ತರು ಎದುರಿಸುತ್ತಿರುವ ಅತಿ ಪ್ರಮುಖ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ
ಬಾಗಲಕೋಟೆ: ಶಾಸಕ, ಬಿಟಿಡಿಎ ಅಧ್ಯಕ್ಷರಾಗಿ ಎಚ್.ವೈ. ಮೇಟಿ ನಿಧನರಾಗಿರುವ ಹಿನ್ನೆಲೆಯಲ್ಲಿ ಸದ್ಯ ಬಿಟಿಡಿಎಗೆ ಅಧ್ಯಕ್ಷರು ಇಲ್ಲದೆ ಅಧಿಕಾರಿಗಳ ಆಡಳಿತ ನಡೆದಿದೆ. ಹೀಗಾಗಿ ನಗರದ ಮುಳುಗಡೆ ಸಂತ್ರಸ್ತರು ಎದುರಿಸುತ್ತಿರುವ ಅತಿ ಪ್ರಮುಖ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ.
ಇದೀಗ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ಕೈಗಾರಿಕೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಸ್.ಜಿ. ನಂಜಯ್ಯಮಠ ಅವರು ಸಮಸ್ಯೆಗಳನ್ನು ಪಟ್ಟಿಮಾಡಿ ಬಿಟಿಡಿಎ ಮುಖ್ಯ ಇಂಜಿನಿಯರ್‌ಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
ಬಾಗಲಕೋಟೆ ನಗರದ ವಾರ್ಡ್ ನಂಬರ್ 2, 3, 9 ಹಾಗೂ 11ರಲ್ಲಿ ಮುಳುಗಡೆಯಾದ ಅತಿಕ್ರಮದ ಸಂತ್ರಸ್ತರಿಗೆ ಅನುಕಂಪ ಪರಿಹಾರ ವಿತರಿಸುವ ಕೆಲಸ ಆಗಿಲ್ಲ. ಅದನ್ನು ಕೂಡಲೇ ವಿತರಿಸುವ ಕೆಲಸ ಮಾಡಬೇಕು. ವಾರ್ಡ್ ನಂಬರ್ 10ರಲ್ಲಿ ರಸ್ತೆ ಅಗಲೀಕರಣದಲ್ಲಿ ಅತೀಕ್ರಮಣ ಕುಟುಂಬಗಳು 14 ಇದ್ದು, ಅವರಿಗೆ ಅನುಕಂಪ ಪರಿಹಾರ ವಿತರಿಸಬೇಕು. ನಗರದಲ್ಲಿ ಸ್ವಚ್ಛತೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಗರದ ಮುಖ್ಯ ಸಂತ್ರಸ್ತರು ಹಾಗೂ ಅವರ ವಯಸ್ಕ ಮಕ್ಕಳಿಗೆ, ಬಾಡಿಗೆದಾರರಿಗೆ ಹಕ್ಕು ಪತ್ರ ಕೊಡುತ್ತಿಲ್ಲ. ಕೂಡಲೇ ಅರ್ಹರಿಗೆ ಹಕ್ಕು ಪತ್ರ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.