ಕಲಾದಗಿಯಲ್ಲಿ ‘ಹೂಗಾರ ದತ್ತಿ ಪುಸ್ತಕ ಪ್ರಶಸ್ತಿ’ ಸ್ವೀಕರಿಸುತ್ತಿರುವ ಡಾ. ಕರವೀರಪ್ರಭು ಕ್ಯಾಲಕೊಂಡ, ಡಾ. ವೈ.ವೈ. ಕೊಕ್ಕನವರ, ಡಾ. ರಮೇಶ ಕುಂಬಾರ, ವಿಜಯಲಕ್ಷ್ಮೀ ಕಗಲಗೊಂಬ, ಅನಸೂಯಾ ಯಲಿಗಾರ, ಮಲ್ಲಮ್ಮ ಜೋಂಡಿ. ಎಸ್.ಆರ್. ಮನಹಳ್ಳಿ, ಪಿ.ಎಲ್. ಹೂಗಾರ, ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮುಂತಾದವರಿದ್ದರು. 
ಬಾಗಲಕೋಟೆ

ಸಾಹಿತ್ಯದಿಂದ ಸಮಾಜದ ಏಳಿಗೆ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಚಿಂತಕ ಎಸ್.ಆರ್. ಮನಹಳ್ಳಿ ಅಭಿಮತ
  • ಹೂಗಾರ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ
  • ಸಮಾಜಕ್ಕೆ ಹಾಗೂ ಸಮಾಜಮುಖಿ ಸೇವೆ ಮಾಡುವವರಿಗೆ ಸಾಹಿತ್ಯ ಪ್ರೇರಣೆಯಾಗುತ್ತದೆ.
ಕಲಾದಗಿ: ಸಮಾಜಕ್ಕೆ ಹಾಗೂ ಸಮಾಜಮುಖಿ ಸೇವೆ ಮಾಡುವವರಿಗೆ ಸಾಹಿತ್ಯ ಪ್ರೇರಣೆಯಾಗುತ್ತದೆ. ಶಿವರಾಮ ಕಾರಂತರ ‘ಜೋಮನದುಡಿ’ ಕಾದಂಬರಿ ದೇವರಾಜ ಅರಸು ಅವರಿಗೆ ‘ಉಳುವವನೇ ಭೂಮಿ ಒಡೆಯ’ ಎಂಬ ಮಹತ್ವದ ಕಾನೂನು ರೂಪಿಸಲು ಪ್ರೇರಣೆಯಾಗಿದ್ದು, ಇದಕ್ಕೆ ಸಾಕ್ಷಿಯಾಗಿದೆ. ಧರ್ಮ, ಶಿಕ್ಷಣ ಹಾಗೂ ಸಾಹಿತ್ಯದಿಂದ ದೂರಾದರೆ ಸಮಾಜದ ಏಳಿಗೆ ಸಾಧ್ಯವಿಲ್ಲ ಎಂದು ಹಿರಿಯ ಶಿಕ್ಷಣ ಚಿಂತಕ ಎಸ್.ಆರ್. ಮನಹಳ್ಳಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಕೊಡಮಾಡುವ ಜಿಲ್ಲೆಯ ಪ್ರತಿಷ್ಠಿತ ದತ್ತಿ ಪುಸ್ತಕ ಪ್ರಶಸ್ತಿಗಳಲ್ಲೊಂದಾದ ‘ಕಲಾದಗಿ ಹೂಗಾರ ದತ್ತಿ ಪುಸ್ತಕ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸಮಾಜದಲ್ಲಿ ಸತ್ಯದ ಮೌಲ್ಯವನ್ನು ಬಿತ್ತುವ ಕೆಲಸ ಸಾಹಿತ್ಯದಿಂದ ಮಾತ್ರ ಸಾಧ್ಯ. ಅದಕ್ಕಾಗಿ ಕ್ರಿಯಾಶೀಲ ಲೇಖಕ, ಲೇಖಕಿಯರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.
ದತ್ತಿ ದಾನಿಗಳಾದ ಪಿ.ಎಲ್. ಹೂಗಾರ ಮಾತನಾಡಿ, ಉತ್ತಮ ಸಮಾಜದ ನಿರ್ಮಾಣಕ್ಕೆ ಸಾಹಿತ್ಯವೂ ಪ್ರೇರಣೆಯಾಗುತ್ತದೆ ಎಂಬುದನ್ನು ಅರಿತು ನಿವೃತ್ತಿ ನಂತರ ಬಂದ 5 ಲಕ್ಷ ರೂ. ಹಣವನ್ನು ಸಾಹಿತ್ಯ ಪರಿಷತ್ತಿನಲ್ಲಿಟ್ಟು ಕ್ರಿಯಾಶೀಲ ಲೇಖಕಿ, ಲೇಖಕರಿಗೆ ಪ್ರಶಸ್ತಿಯನ್ನು ಕೊಡಲಾಗುತ್ತಿದೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ದತ್ತಿ ದಾನಿಗಳ ಆಶಯದಂತೆ ಈ ಅಧಿಕಾರವಧಿಯಲ್ಲಿ 30ಕ್ಕೂ ಅಧಿಕ ಲೇಖಕ, ಲೇಖಕಿಯರಿಗೆ ಪ್ರಶಸ್ತಿ ನೀಡಲಾಗಿದೆ ಎಂದರು.
ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ, ಕಾರ್ಯದರ್ಶಿ ವಿ.ಜಿ. ದೇಶಪಾಂಡೆ, ಹಿರಿಯ ಸಾಹಿತಿ ಡಾ. ತಾತಸಾಹೇಬ ಭಾಂಗಿ, ಯು.ಬಿ. ಕುಲಕರ್ಣಿ, ಪತ್ರಕರ್ತ ದ.ರಾ. ಪುರೋಹಿತ ಇದ್ದರು. ಲಕ್ಷ್ಮಣ ಅಂಕಲಗಿ ಸ್ವಾಗತಿಸಿದರು. ಸಿ.ಎಲ್. ಹೂಗಾರ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಶೇಖರ ಹಡಪದ, ಸುನೀಲ ಬಾಗೇವಾಡಿ ನಿರೂಪಿಸಿದರು, ನಿತೀಶ ಪಾಟೀಲ ವಂದಿಸಿದರು.
ಹೂಗಾರ ದತ್ತಿ ಪ್ರಶಸ್ತಿ ಸ್ವೀಕರಿಸಿದ ಡಾ. ಕರವೀರಪ್ರಭು ಕ್ಯಾಲಕೊಂಡ, ಡಾ. ವೈ.ವೈ. ಕೊಕ್ಕನವರ, ಡಾ. ರಮೇಶ ಡಿ. ಕುಂಬಾರ, ವಿಜಯಲಕ್ಷ್ಮೀ ಕಗಲಗೊಂಬ, ಅನಸೂಯಾ ಯಲಿಗಾರ, ಮಲ್ಲಮ್ಮ ಜೋಂಡಿ ಮಾತನಾಡಿ ಪ್ರತಿಷ್ಠಿತ ಹೂಗಾರ ದತ್ತಿ ಪ್ರಶಸ್ತಿ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಸಂತಸ ವ್ಯಕ್ತಮಾಡಿದರು.