ಬಾಗಲಕೋಟೆ ಟೀಕಿನಮಠದ ನೂತನ ಶ್ರೀಗಳಾದ ಮಲ್ಲಿಕಾರ್ಜುನ ಸ್ವಾಮೀಜಿಗೆ ಭಾನುವಾರ ಸಮಾಧಾನ ಆಶ್ರಮದ ಮೌನಯೋಗಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಷಟ್‌ಸ್ಥಲ ಬ್ರಹ್ಮೋಪದೇಶ ನೀಡಲಾಯಿತು.  
ಬಾಗಲಕೋಟೆ

ಸಮಾಜವೇ ನನ್ನ ಕುಟುಂಬ-ಮಠಕ್ಕೆ ಭಕ್ತರಾಗಿ ಬನ್ನಿ

ಪ್ರಮುಖ ಮುಖ್ಯಾಂಶಗಳು

  • ಭಕ್ತಗಣಕ್ಕೆ ಟೀಕಿನಮಠದ ನೂತನ ಶ್ರೀಗಳ ಸಲಹೆ
  • ಮಲ್ಲಿಕಾರ್ಜುನ ಗುರು ರೇವಣಸಿದ್ಧ ಸ್ವಾಮೀಜಿ ಪಟ್ಟಾಧಿಕಾರ
  • ಶ್ರೀಮಠಕ್ಕೆ ರಾಜಕೀಯ ತೆಗೆದುಕೊಂಡು ಬರಬೇಡಿ
ಬಾಗಲಕೋಟೆ: ‘ಮಠಾಧಿಪತಿಯಾಗಿ ಈ ಸಮಾಜವನ್ನೆ ನನ್ನ ಕುಟುಂಬ ಎಂದು ಭಾವಿಸಿಕೊಂಡು ಶ್ರಮಿಸುತ್ತೇನೆ. ತಾವುಗಳು ಶ್ರೀಮಠಕ್ಕೆ ಬರುವಾಗ ರಾಜಕೀಯ ಮುಖಂಡರಾಗಿ ಬಾರದೇ ಓರ್ವ ಸಾಮಾನ್ಯ ಭಕ್ತರಂತಾಗಿ ಬನ್ನಿರಿ’ ಎಂದು ನಗರದ ಟೀಕಿನಮಠದ ನೂತನ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗುರು ಶ್ರೀ ರೇವಣಸಿದ್ಧ ಸ್ವಾಮೀಜಿ ಮಠದ ಭಕ್ತರಿಗೆ ಸಲಹೆ ನೀಡಿದರು.
ನಗರದ ಪ್ರಸಿದ್ಧ ಟೀಕಿನಮಠಕ್ಕೆ ನೂತನ ಪೀಠಾಧಿಪತಿಯಾಗಿ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಅವರಿಂದ ಲಿಂಗಹಸ್ತದಿಂದ ಚರಪಟ್ಟಾಧಿಕಾರ ಪಡೆದು, ಶೂನ್ಯಪೀಠಾರೋಹಣ ಮಾಡಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಭಕ್ತರಿಗೆ ಆಶೀರ್ವಚನ ಸಂದೇಶ ನೀಡಿದರು.
ಗುರುವಿಗಾಗಿ ತಾವು ಮಾಡಿದ ಶ್ರಮ ಸ್ಮರಣಾದಾಯಕವಾಗಿದೆ. ತಮ್ಮ ಮುಡಿಗೆ ಹೂ ತಾರದೇ ಹುಲ್ಲನೆಂದು ತರಲಾರೆ. ಸಮಾಜದ ಮಗುವಾಗಿ ತಮ್ಮ ಮಧ್ಯೆ ಇದ್ದು ಸಾಮಾಜವನ್ನು ಕುಟುಂಬವಾಗಿಸಿ ಶ್ರಮಿಸುವ ಕೆಲಸವನ್ನು ಮಾಡುತ್ತೇನೆ. ಕಾವಿ ಜೀವನಕ್ಕೆ ಶಕ್ತಿಯಾದ ಕುಮಾರ ಸ್ವಾಮಿಗಳು, ಬಸವಣ್ಣ, ನಿಜಗುಣ ಸ್ವಾಮಿಗಳ ಮಾರ್ಗದಲ್ಲಿ ನಡೆದು ಶ್ರೀಮಠದ ಪರಂಪರೆಯನ್ನು ಮುನ್ನಡಿಸುವ ಜವಾಬ್ದಾರಿ ತೆಗೆದುಕೊಂಡಿದ್ದು, ಇದಕ್ಕೆ ಬಾಗಲಕೋಟೆ ಭಕ್ತರ ಸಹಕಾರ ಅತ್ಯಗತ್ಯ ಎಂದರು.
ಪೀಠಾಧಿಪತಿ ಎಂದರೆ ವಿಷ ಕುಡಿದ ನಂಜಿನ ಜೀವನ ಇದ್ದಂತೆ. ಸರ್ವರನ್ನೂ ಸಮಾನರನ್ನಾಗಿಸಿಕೊಂಡು ಹೋಗುವ ಹೊಣೆ ಮಠಗಳಿಗಿದ್ದು, ಮಠಕ್ಕೆ ಬರುವಾಗ ಭಕ್ತರಾಗಿ ಬನ್ನಿ. ಇಲ್ಲಿ ಯಾರೂ ರಾಜಕೀಯವನ್ನು ತೆಗೆದುಕೊಂಡು ಬರಬೇಡಿ ಎಂದು ಕಿವಿಮಾತು ಹೇಳಿದರು.
ಪಟ್ಟಾಧಿಕಾರ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಚರಂತಿಮಠದ ಪ್ರಭು ಸ್ವಾಮಿಗಳು ಮಾತನಾಡಿ, ಗುರು ತನ್ನ ಶಕ್ತಿ ಮತ್ತು ಸ್ಥಾನವನ್ನು ಶಿಷ್ಯನಿಗೆ ನೀಡುವುದರ ಮೂಲಕ ಶಿಷ್ಯನನ್ನು ಗುರುವಾಗಿಸುವುದು ಶೂನ್ಯಪೀಠಾರೋಹಣ ಆಗಿದೆ. ಎಲ್ಲವೂ ಇದ್ದು ಎಲ್ಲವನ್ನು ಸಮಾಜಕ್ಕೆ ಅರ್ಪಣೆ ಮಾಡಿ ಶೂನ್ಯಭಾವದಿಂದ ದೇವರಿಗೆ ಶರಣಾಗುವುದು ಶೂನ್ಯಪೀಠದ ಉದ್ದೇಶವಾಗಿದೆ. ಇಲ್ಲಿ ದೊಡ್ಡವರು ಚಿಕ್ಕವರು ಎಂಬ ಭೇದವಿಲ್ಲದೆ ಶರಣರೆಲ್ಲರೂ ಸಮಾನರಾಗುತ್ತಾರೆ. ಪಟ್ಟಾಧಿಕಾರದ ಬಳಿಕ ಈಗ ಮಲ್ಲಿಕಾರ್ಜುನ ದೇಶಿಕರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗುರು ಶ್ರೀ ರೇವಣಸಿದ್ದ ಸ್ವಾಮಿಗಳಾಗಿ ಮರುನಾಮಕರಣದಿಂದ ಸಮಾಜಕ್ಕಾಗಿ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಟೀಕಿನಮಠ ಸಂಪ್ರದಾಯದಿಂದ ಕೂಡಿದ ಮಠವಾಗಿದೆ. ಬ್ರಹ್ಮಜ್ಞಾನಕ್ಕಾಗಿ ಆಶ್ರಮ, ಗುರುಕುಲಗಳು ಹುಟ್ಟಿಕೊಂಡವು. 19 ಮತ್ತು 20 ನೇ ಶತಮಾನದ ಪೂರ್ವ ಮಠಾಧೀಶರ ಕೆಲಸವನ್ನು ಇಡೀ ಮಾನವ ಕುಲ ಮರೆಯಲು ಸಾಧ್ಯವಿಲ್ಲ. ಮಾನವ ಕುಲಕೋಟಿಗಾಗಿ ಬಸವಣ್ಣ, ಅಲ್ಲಮ ಪ್ರಭು ಅವರು ವಚನದಲ್ಲಿನ ಕಾಯಕದ ಸಾರಾಂಶವನ್ನು ಅರಿಯಬೇಕು. ಜಾತಿ, ಕುಲವನ್ನು ಬದಿಗಿಟ್ಟುಕೊಂಡು, ಇತಿಹಾಸದ ಪುಟವನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಕೊಡಬೇಕು ಎಂದು ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರದ ಸಂಪುಟ ಪತ್ರ ಹಾಗೂ ಮಠದ ಜವಾಬ್ದಾರಿಯನ್ನು ನೀಡಿ ಮಾತನಾಡಿ, ಸಮಾಜಕ್ಕೆ ಸ್ವಾಮಿಗಳು ಪರಿಚಯ ಆಗಬೇಕಾದರೆ ತಪಸ್ಸು, ಪೂಜಾನಿಷ್ಠೆ, ಶಿವನಪೂಜೆ, ಅನುಷ್ಠಾನವನ್ನು ಮಾಡಬೇಕು. ಸ್ವಾಮಿಗಳ ಪಟ್ಟವನ್ನು ಧರಿಸಬೇಕಾದರೆ ಮಾತಿನ ಮೇಲೆ ಹಿಡಿತ, ಮೈ ತುಂಬಾ ಕಣ್ಣು ಇದ್ದಾಗ ಮಾತ್ರ ಸಮಾಜದಲ್ಲಿ ನಂಬಿಕಸ್ಥ ಸ್ವಾಮಿಯಾಗಲು ಸಾಧ್ಯ ಎಂದರು.
ಹುಬ್ಬಳ್ಳಿಯ ಎರಡೆತ್ತಿನಮಠದ ಸಿದ್ಧಲಿಂಗ ಸ್ವಾಮಿಗಳು, ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಗಳು, ಗುಳೇದಗುಡ್ಡ ಮುರಾಘಾಮಠದ ಕಾಶೀನಾಥ ಸ್ವಾಮಿಗಳು, ನವಲಗುಂದ ಗವಿಮಠದ ಬಸವಲಿಂಗ ಸ್ವಾಮಿಗಳು, ಗುಳೇದಗುಡ್ಡ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ, ಗುರಗುಂಟಾ ಸದಾನಂದ ಶಿವಾಚಾರ್ಯ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮಿಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ ಸೇರಿದಂತೆ ಟೀಕಿನಮಠ ಭಕ್ತ ಮಂಡಳಿಯವರು ಭಾಗವಹಿಸಿದ್ದರು.

ಷಟ್‌ಸ್ಥಲ ಬ್ರಹ್ಮೋಪದೇಶ

ಭಾನುವಾರ ಬೆಳಗಿನ ಜಾವ ಟೀಕಿನಮಠದಲ್ಲಿ ಮಠದ ಉತ್ತರಾಧಿಕಾರಿಯಾಗಿ ಮಲ್ಲಿಕಾರ್ಜುನ ಶ್ರೀಗಳಿಗೆ ವಿವಿಧ ಪೂಜ್ಯರ ಸಮ್ಮುಖದಲ್ಲಿ ಬೆಂಗಳೂರಿನ ಸಮಾಧಾನ ಆಶ್ರಮದ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಷಟ್‌ಸ್ಥಲ ಬ್ರಹ್ಮೋಪದೇಶವನ್ನು ಶಾಸೋಕ್ತವಾಗಿ ನೆರವೇರಿಸಲಾಯಿತು.

ಅಡ್ಡಪಲ್ಲಕ್ಕಿ ಉತ್ಸವ

ಶೂನ್ಯಪೀಠಾರೋಹಣ ಬಳಿಕ ಪೂಜ್ಯ ಟೀಕಿನಮಠದ ನೂತನ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ಬಿವಿವಿ ಸಂಘದ ಬೀಳೂರ ಅಜ್ಜನ ಗುಡಿಯಿಂದ ಪ್ರಾರಂಭವಾದ ಅಡ್ಡಪಲ್ಲಕ್ಕಿ ಉತ್ಸವವು ಬಸವೇಶ್ವರ ವೃತ್ತ, ಮಹಾತ್ಮಾ ಗಾಂದಿ ರಸ್ತೆ, ಪೊಲೀಸ್ ಚೌಕಿ, ಅಡತ ಬಜಾರ ಮೂಲಕ ಟೀಕಿನಮಠಕ್ಕೆ ಸಮಾರೋಪಗೊಂಡಿತು. 1008 ಮಹಿಳೆಯರ ಕುಂಭ ಮೇಳ ಗಮನಸೆಳೆಯಿತು. ವಿವಿಧ ವಾದ್ಯವೈಭವಗಳ ಜೊತೆಗೆ ಸಾಂಸ್ಕೃತಿಕ ತಂಡಗಳು ಮತ್ತಷ್ಟು ಮೆರಗು ಹೆಚ್ಚಿಸಿದವು. ಶ್ರೀಮಠದ ಅಪಾರ ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು.