ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಮಪುರದ ದಾನೇಶ್ವರಿ ಸಮುದಾಯ ಭವನದಲ್ಲಿ ನಡೆದ ಜನ್ಮದಿನ ಹಾಗೂ ಸನ್ಮಾನ ಸಮಾರಂಭದಲ್ಲಿ ಶಾಸಕ ಸಿದ್ದು ಸವದಿ ಅವರನ್ನು ಮಠಾಧೀಶರು ಗೌರವಿಸಿದರು. ಬನಹಟ್ಟಿ ಹಿರೇಮಠದ ಶರಣವಬಸ ಶಿವಾಚಾರ್ಯರು, ಚಿಮ್ಮಡ ಪ್ರಭುದೇವರು ಇತರರಿದ್ದರು.
- ಶಾಸಕ ಸಿದ್ದು ಸವದಿ ಘೋಷಣೆ
- 2028ರ ಚುನಾವಣೆಯೇ ನನ್ನ ಕೊನೆಯ ಸ್ಪರ್ಧೆ
- ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಸಲಹೆ ನೀಡಿದ ಸವದಿ, ಚುನಾವಣೆ ವೇಳೆ ಮಾತ್ರ ಸಕ್ರಿಯರಾಗದೆ, ನಿರಂತರವಾಗಿ ಜನಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು.
ರಬಕವಿ/ಬನಹಟ್ಟಿ: ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಜನರ ಆಶೀರ್ವಾದ ಮತ್ತು ವಿಶ್ವಾಸವೇ ನನ್ನ ಶಕ್ತಿಯಾಗಿದ್ದು, 2028ರ ವಿಧಾನಸಭೆ ಚುನಾವಣೆಯೇ ನನ್ನ ರಾಜಕೀಯ ಜೀವನದ ಕೊನೆಯ ಸ್ಪರ್ಧೆಯಾಗಲಿದೆ ಎಂದು ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಘೋಷಿಸಿದರು.
ರಾಮಪುರದ ದಾನೇಶ್ವರಿ ಸಮುದಾಯ ಭವನದಲ್ಲಿ ಬುಧವಾರ ತಮ್ಮ 67ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಿಂತ ಜನಸೇವೆ ಮುಖ್ಯವಾಗಿದ್ದು, ಸಮಾಜಸೇವೆಯೇ ತಮ್ಮ ರಾಜಕೀಯದ ಮೂಲ ಉದ್ದೇಶ ಎಂದರು.
ಧರ್ಮ ಹಾಗೂ ದೇಶಕ್ಕೆ ಧಕ್ಕೆಯಾಗುವ ಯಾವುದೇ ಬೆಳವಣಿಗೆಯನ್ನು ವಿರೋಧಿಸುವುದಾಗಿ ಹೇಳಿದ ಅವರು, ಮನುಷ್ಯ ಸಮಾಜಕ್ಕೆ ಕೊಡುಗೆ ನೀಡಿದಾಗ ಮಾತ್ರ ಇತಿಹಾಸದಲ್ಲಿ ಉಳಿಯಲು ಸಾಧ್ಯ ಎಂದರು.
ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಸಲಹೆ ನೀಡಿದ ಸವದಿ, ಚುನಾವಣೆ ವೇಳೆ ಮಾತ್ರ ಸಕ್ರಿಯರಾಗದೆ, ನಿರಂತರವಾಗಿ ಜನಸೇವೆ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಯೋಗ್ಯತೆ, ಸೇವೆ ಮತ್ತು ಸಂಘಟನಾ ಬದ್ಧತೆಯನ್ನು ಆಧರಿಸಿ ಪಕ್ಷ ಅವಕಾಶ ನೀಡುತ್ತದೆ ಎಂದು ಹೇಳಿದರು.
ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಚಿಮ್ಮಡದ ಪ್ರಭುದೇವರು ಸೇರಿ ವಿವಿಧ ಮಠಾಧೀಶರು ಹಾಗೂ ಗಣ್ಯರು ಸಿದ್ದು ಸವದಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.
ವಿದ್ಯಾಧರ ಸವದಿ, ಬಸವರಾಜ ತೆಗ್ಗಿ, ಸಿದ್ಧನಗೌಡ ಪಾಟೀಲ, ಶ್ರೀಶೈಲ ಬೀಳಗಿ, ಶಂಕರ ಜುಂಜಪ್ಪನವರ, ಬಾಬುಗೌಡ ಪಾಟೀಲ, ಶ್ರೀಶೈಲ ದಭಾಡಿ, ಗಣಪತರಾವ ಹಜಾರೆ, ಸತೀಶ ಹಜಾರೆ, ಮಹಾದೇವ ಧೂಪದಾಳ, ಶಂಕರ ಭುಜರುಕ, ಸುಭಾಷ ಚೋಳಿ, ಧರೆಪ್ಪ ಉಳಾಗಡ್ಡಿ, ರಾಮಣ್ಣ ಹಿಡಕಲ್, ಪ್ರವೀಣ ನಾಡಗೌಡ, ಶಂಕರಗೌಡ ಪಾಟೀಲ, ಶಿವು ಅಂಗಡಿ, ಮಹಾದೇವ ಕೋಟ್ಯಾಳ ಸೇರಿ ಅನೇಕರು ಉಪಸ್ಥಿತರಿದ್ದರು.