ಬಾಗಲಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಎಸ್‌ಐಆರ್ ಕುರಿತ ಮಾಹಿತಿ ನೀಡಿವ ಕಾರ್ಯಕ್ರಮವನ್ನು ಶಾಸಕ ಉಮೇಶ ಮೇಟಿ ಚಾಲನೆ ನೀಡಿದರು. ಮಾಜಿ ಸಚಿವ ಅಜಯಕುಮಾರ ಸರನಾಯಕ, ಎನ್.ಬಿ.ಗಸ್ತಿ, ನಾಗರಾಜ ಹದ್ಲಿ, ಅಕ್ಬರ್ ಮುಲ್ಲಾ ಮತ್ತಿತರರು ಇದ್ದರು. 
ಬಾಗಲಕೋಟೆ

ಎಸ್‌ಐಆರ್ ಪ್ರಜಾಪ್ರಭುತ್ವ ಬಲಪಡಿಸುವ ಕಾರ್ಯ

ಬಾಗಲಕೋಟೆ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕೇವಲ ಚುನಾವಣೆ ಪ್ರಕ್ರಿಯೆ ಒಂದು ಭಾಗ ಮಾತ್ರವಲ್ಲ. ಎಸ್‌ಐಆರ್ ಎನ್ನುವುದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಹತ್ವದ ಕಾರ್ಯವಾಗಿದೆ ಎಂದು ಮಾಜಿ ಸಚಿವ ಅಜಯಕುಮಾರ ಸರನಾಯಕ ಹೇಳಿದರು.
ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ನವನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್‌ಐಆರ್ ಮಹತ್ವದ ಕುರಿತ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪ, ದೋಷ ಅಥವಾ ಅರ್ಹ ಮತದಾರರ ಹೆಸರು ಕೈಬಿಡುವಂತಹ ಘಟನೆಗಳು ನಡೆಯದಂತೆ ನಮ್ಮ ಕಾರ್ಯಕರ್ತರು ಹೆಚ್ಚಿನ ಜಾಗರೂಕತೆಯಿಂದ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಸಮರ್ಪಕ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಮತದಾರರ ಪಟ್ಟಿಯನ್ನು ನಿಖರಗೊಳಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಶಾಸಕ ಉಮೇಶ ಮೇಟಿ ಮಾತನಾಡಿ, ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಅತ್ಯಂತ ಅವಶ್ಯಕವಾಗಿದೆ. ಹೊಸದಾಗಿ ೧೮ ವರ್ಷ ಪೂರೈಸಿದ ಯುವಕರು, ಸ್ಥಳಾಂತರಗೊAಡ ಮತದಾರರು ಹಾಗೂ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಅಳಿಸುವಿಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದರು.
ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಮೂಲಕ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದೆ. ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಹೆಸರು ಕೈಬಿಡುವಿಕೆ ಸೇರಿದಂತೆ ವಿವಿಧ ನಮೂನೆಗಳ ಭರ್ತಿ, ದಾಖಲೆಗಳ ಪರಿಶೀಲನೆ ಹಾಗೂ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಲಾಯಿತು. ಬೂತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ ಮುಲ್ಲಾ, ಬುಡಾ ಅಧ್ಯಕ್ಷ ಅಬ್ದುಲ ರಜಾಕ ಬೇಣೂರ, ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅನಿಲ ದಡ್ಡಿ, ಜಿಲ್ಲಾ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಎನ್.ಬಿ.ಗಸ್ತಿ, ಪ್ರಭು ಹಳ್ಳೂರ, ಹಾಜಿಸಾಬ ದಂಡಿನ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ನ್ಯಾಮಗೌಡ, ಮಂಜುಳಾ ಕಮತಗಿ, ಮಂಜುಳಾ ಭುಸಾರೆ ಮತ್ತಿತರರು ಇದ್ದರು.