ಗುಳೇದಗುಡ್ಡದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಚಾಲನೆ ನೀಡಿ ಮಾತನಾಡಿದರು. ಮಾಜಿ ಶಾಸಕ ರಾಜಶೇಖರ ಶೀಲವಂತ, ಡಾ. ನೀಲಕಂಠ ಶಿವಾಚಾರ್ಯರು, ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು, ಭೂವನೇಶ ಪೂಜಾರ ಇದ್ದರು. 
ಬಾಗಲಕೋಟೆ

ಶಿವಾಜಿ ಹಿಂದೂ ಧರ್ಮದ ರಕ್ಷಕ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿಕೆ
  • ಹಿಂದೂ ಪರ ಸಂಘಟನೆಗಳಿಂದ ಬೃಹತ್ ಬೈಕ್ ರ‍್ಯಾಲಿ
ಗುಳೇದಗುಡ್ಡ: ಹಿಂದೂ ಧರ್ಮ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದರು. ಅವರಲ್ಲಿ ಇಂತಹ ಶೌರ್ಯ, ಧೈರ್ಯ, ಪರಾಕ್ರಮ ಬೆಳೆಯಲು ಶಿವಾಜಿ ಅವರ ತಾಯಿ ಜೀಜಾಬಾಯಿ ಅವರ ಪ್ರೇರಣೆಯೇ ಕಾರಣ. ನಮ್ಮ ಮಕ್ಕಳಿಗೆ ನಾವು ಶಿವಾಜಿಯ ಕಥೆ ಹೇಳಿ ಅವರಲ್ಲಿ ಶೌರ್ಯ, ಧೈರ್ಯ ಬೆಳೆಸಬೇಕು ಎಂದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.
ಪಟ್ಟಣದ ಗುಲಾಬ ಚಿತ್ರಮಂದಿರದ ಹತ್ತಿರ ಸ್ಥಳೀಯ ಹಿಂದೂ ಸಂಘಟನೆಗಳ ವತಿಯಿಂದ ಶುಕ್ರವಾರ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿ, ಭಾರತ ಇಂದು ಜಗತ್ತಿನ ನಾಯಕನಾಗುವತ್ತ ಹೆಜ್ಜೆ ಹಾಕುತ್ತಿದೆ. ಅದರೆ ಇದನ್ನು ತಡೆಯಲು ನಮ್ಮಲ್ಲಿಯೇ ಬೇಧ ಮೂಡಿಸಿ ದೇಶವನ್ನು ಒಡೆಯವ ಕೆಲಸವನ್ನು ದುಷ್ಟ ಶಕ್ತಿಗಳು ಮಾಡುತ್ತಿವೆ. ನಾವು ಇದಕ್ಕೆ ಆಸ್ಪದ ಕೊಡಬಾರದು. ಹಿಂದೂ ಸಮಾಜ ಎಚ್ಚರವಾಗಿರಬೇಕು. ರಾಷ್ಟ್ರ ಹಾಗೂ ಧರ್ಮಕ್ಕೆ ಧಕ್ಕೆ ಬಂದಾಗ ನಾವೆಲ್ಲ ಒಂದಾಗಿ, ನಾವೆಲ್ಲಾ ಹಿಂದೂ ಎಂದು ಹೋರಾಡಬೇಕು. ನಮಗೆ ಛತ್ರಪತಿ ಶಿವಾಜಿ ಮಹಾರಾಜರು ಪ್ರೇರಣೆಯಾಗಬೇಕು ಎಂದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಛತ್ರಪತಿ ಶಿವಾಜಿಯವರ ಧೈರ್ಯ, ಶೌರ್ಯ, ಪರಾಕ್ರಮ, ಹೋರಾಟ ಮನೋಭಾವ ಅಪ್ರತಿಮ, ದೇಶಕ್ಕೆ ಶಿವಾಜಿಯಂತಹ ಯುವಕರು ಇಂದು ಅವಶ್ಯಕವಾಗಿದ್ದು, ದೇಶ, ಧರ್ಮದ ರಕ್ಷಣೆಗೆ ಯುವಕರು ಮುಂದಾಗಬೇಕು ಎಂದು ಹೇಳಿದರು.
ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯರು, ಮರಡಿಮಠದ ಶ್ರೀ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು, ಹಿಂದೂ ಮುಖಂಡ ಭೂವನೇಶ ಪೂಜಾರ ಮಾತನಾಡಿದರು.
ಪಟ್ಟಣದ ಗುಲಾಬ ಚಿತ್ರ ಮಂದಿರದಿಂದ ಶಿವಾಜಿ ಮೂರ್ತಿಯೊಂದಿಗೆ ಪ್ರಾರಂಭವಾದ ಬೈಕ್ ರ‍್ಯಾಲಿ, ಪಟ್ಟಣದ ಪವಾರ ಕ್ರಾಸ್, ಪುರಸಭೆ, ಸರಾಫ್ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಅರಳಿಕಟ್ಟಿ, ಗುಗ್ಗರಿಪೇಟೆ, ಯಾನಮನಶೆಟ್ಟಿ ಅಂಗಡಿ, ಮರಡಿಮಠ, ಸಾಲೇಶ್ವರ ದೇವಸ್ಥಾನ, ಪಾದನಕಟ್ಟಿ ಕ್ರಾಸ್, ಹರದೊಳ್ಳಿ, ಶಕ್ತಿಟಾಕೀಜ ಮೂಲಕ. ಕಮತಗಿ ಕ್ರಾಸ್‌ಗೆ ಬಂದು ತಲುಪಿ ಮುಕ್ತಾಯಗೊಂಡಿತು. ರ‍್ಯಾಲಿಯಲ್ಲಿ ಐದು ನೂರಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ಯುವಕರು ಭಾವಹಿಸಿದ್ದರು. ಬೈಕ್‌ಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು, ಶಿವಾಜಿ ಮಹಾರಾಜರ ಜಯ ಘೋಷಣೆಯೊಂದಿಗೆ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.