ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ
- ಮಾಜಿ ಸಿಎಂಗೆ ಸಚಿವ ತಿಮ್ಮಾಪೂರ ತಿರುಗೇಟು
- ರಾಜ್ಯಕ್ಕೆ ಅವರ ಕೊಡುಗೆ ಏನು?
- ರಾಜ್ಯ ಸರ್ಕಾರದ ಖಜಾನೆ ಖಾಲಿ ಖಾಲಿ
ಬಾಗಲಕೋಟೆ: ರಾಜ್ಯ ಸರ್ಕಾರದ ಖಜಾನೆ ಖಾಲಿ ಖಾಲಿ ಎಂದು ಟೀಕೆ ಮಾಡಿದ್ದ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರು ತಮ್ಮ ಸರ್ಕಾರದಲ್ಲಿ ರಾಜ್ಯಕ್ಕೆ ಏನೇನು ಮಾಡಿದ್ದಾರೆಂದು ಹೇಳಲಿ ಎಂದು ಸವಾಲು ಎಸೆದರು.
ರಾಜ್ಯ ಬಿಡಿ, ಬಾಗಲಕೋಟೆ ಜಿಲ್ಲೆಯೊಂದಕ್ಕೆ ಹೋಲಿಕೆ ಮಾಡಿದರೆ ನಮ್ಮ ಸರ್ಕಾರ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಹಣಕಾಸು ಒದಗಿಸುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಜಮೀನಿಗೆ ಬೆಲೆ ನಿರ್ಧಾರ ಮಾಡಿ, ಶೀಘ್ರದಲ್ಲೇ ಮುಖ್ಯಮಂತ್ರಿಗಳಿಂದ ಪರಿಹಾರ ಚೆಕ್ ಕೊಡಿಸುತ್ತೇವೆ. ಇವೆಲ್ಲವೂ ಅಭಿವೃದ್ಧಿ ಕೆಲಸಗಳು ಅಲ್ಲವೇನು? ಎಂದು ಪ್ರಶ್ನಿಸಿದರು. ಅದೇ ಬಿಜೆಪಿ ಆಡಳಿತದಲ್ಲಿ ಇದೇ ಜಿಲ್ಲೆಯವರಿಗೆ ಜಲ ಸಂಪನ್ಮೂಲ ಇಲಾಖೆ ಕೊಡಲಾಗಿತ್ತಲ್ಲ, ಅವರೇನು ಮಾಡಿದ್ದಾರೆ ಎಂದು ಹೇಳಲಿ. ನಮ್ಮ ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲದ್ದಕ್ಕೆ ಈ ಎಲ್ಲ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು.
ಚಾಲುಕ್ಯ ಉತ್ಸವಕ್ಕೆ 4 ಕೋಟಿ ರೂ.
ಇದೇ ತಿಂಗಳು ನಡೆಯುವ ಚಾಲುಕ್ಯ ಉತ್ಸವಕ್ಕೆ ರಾಜ್ಯ ಸರ್ಕಾರ 3 ಕೋಟಿ ರೂ. ಅನುದಾನ ನೀಡಿದ್ದು, ಉತ್ಸವಕ್ಕೆ ಈ ಮೊದಲು 80 ಲಕ್ಷ ರೂ. ಇದ್ದು, ಪ್ರವಾಸೋದ್ಯಮ ಇಲಾಖೆಯಿಂದ 20 ಲಕ್ಷ ರೂ. ಬರಲಿದ್ದು, ಒಟ್ಟು 4 ಕೋಟಿ ರೂ. ಅನುದಾನ ಇದ್ದು, ಅದರಲ್ಲಿ ಉತ್ಸವ ನಡೆಸಲಾಗುವುದು ಎಂದರು.
ಇನ್ನು ಉತ್ಸವದ ವೇದಿಕೆ, ಲೈಟಿಂಗ್ ಇತರೆ ಕಾಮಗಾರಿಗಳ ಟೆಂಡರ್ ಕರೆಯದಿರುವ ಪ್ರಶ್ನೆಗೆ ಸರ್ಕಾರದಿಂದ ವಿನಾಯಿತಿ ಪಡೆದು ಸರ್ಕಾರದ ಏಜನ್ಸಿಗೆ ಕೊಡಲಾಗುತ್ತಿದೆ ಎಂದರು. ಸರ್ಕಾರದ ಏಜನ್ಸಿ ಕಡೆಗೆ ವೇದಿಕೆಗೆ ಬೇಕಾದ ಸಲಕರಣಗಳು ಇವೆಯಾ? ಸ್ಥಳೀಯವಾಗಿ ಸೌಲಭ್ಯಗಳು ಇದ್ದಾಗ್ಯೂ ಜಿಲ್ಲಾಡಳಿತ ಹೊರಗಿನವರಿಗೆ ಕೊಡಲು ಮುಂದಾಗಿರುವ ಉದ್ಧೇಶವೇನು? ಕಲಾವಿದರ ಆಯ್ಕೆಗೆ ಮಾನದಂಡವೇನು ಎನ್ನುವ ಪ್ರಶ್ನೆಗೆ, ಇದೆಲ್ಲ ಸ್ಥಳೀಯ ಶಾಸಕರು, ಅಧಿಕಾರಿಗಳು ಸೇರಿ ಅಲ್ಲಿನ ಜನರ ನಿರೀಕ್ಷೆಯಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳ ಕಡೆಗೆ ಬೊಟ್ಟು ತೋರಿಸಿ ಜಾರಿಕೊಂಡರು.
ನೀರು ನಿಲ್ಲಿಸಲು ಪ್ರಥಮ ಆದ್ಯತೆ
ಹಿಪ್ಪರಗಿ ಜಲಾಶಯದ ಗೇಟ್ ಕಟ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲ ದಿನವೇ ಸ್ಥಳಕ್ಕೆ ಭೇಟಿ ನೀಡಿದ್ದೆ. ದುರಸ್ತಿ ತಡವಾಗಿದೆ. ಹೀಗಾಗಿ ನೀರು ಹರಿದು ಹೋಗುತ್ತಿದೆ. ಸಾಧ್ಯವಾದಷ್ಟು ನೀರು ನಿಲ್ಲಿಸಿ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಬಗ್ಗೆ ಗಮನ ಹರಿಸಲಾಗಿದೆ. ಜಲಾಶಯಕ್ಕೆ ಒಳಹರಿವು ಇದ್ದು, ಬೇಸಿಗೆಯಲ್ಲಿ ಅಷ್ಟೇನು ತೊಂದರೆ ಆಗಲಿಲ್ಲಕ್ಕಿಲ್ಲ ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ. ಸದ್ಯ ಜಲಾಶಯದ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.