ಜಮಖಂಡಿ ನಗರದ ಸಾಕ್ಷಾತ್ಕಾರ ಗೃಹ ಕಚೇರಿಯಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅಜಯ ಕಡಪಟ್ಟಿ, ಮಲ್ಲು ದಾನಗೊಂಡ ಇದ್ದರು. 
ಬಾಗಲಕೋಟೆ

ಜಮಖಂಡಿ ಭಾಗದಲ್ಲಿ ತೀವ್ರ ನೀರಿನ ಸಂಕಷ್ಟ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಗದೀಶ ಗುಡಗುಂಟಿ ಮಾಹಿತಿ
  • ತಾಪಮಾನ ಏರಿಕೆಯಿಂದ ಪರಿಸ್ಥಿತಿ ಗಂಭೀರ
ಜಮಖಂಡಿ: ಕೃಷ್ಣಾ ನದಿಯನ್ನು ಅವಲಂಬಿಸಿರುವ ಜಮಖಂಡಿ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಜನರು ಹಾಗೂ ಜಾನುವಾರು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ಎಂದು ಕಳವಳ ವ್ಯಕ್ತಪಡಿಸಿದರು.
ನಗರದ ತಮ್ಮ ಸಾಕ್ಷಾತ್ಕಾರ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಸ್ಯೆ ಪರಿಹಾರಕ್ಕಾಗಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಬೋರ್‌ವೆಲ್ ದುರಸ್ತಿ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಹಿಪ್ಪರಗಿ ಜಲಾಶಯದ ಗೇಟ್ ಹಾನಿಯಿಂದ ಸುಮಾರು 3 ಟಿಎಂಸಿ ನೀರು ಹರಿದು ಹೋಗಿದ್ದು, ಸದ್ಯ ಕೇವಲ 0.8 ಟಿಎಂಸಿ ಡೆಡ್ ಸ್ಟೋರೇಜ್ ಮಾತ್ರ ಉಳಿದಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಜೂನ್ 15ರವರೆಗೆ ನೀರಿನ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ಮಳೆ ಕೊರತೆ ಮತ್ತು ತಾಪಮಾನ ಏರಿಕೆಯಿಂದ ಪರಿಸ್ಥಿತಿ ಗಂಭೀರವಾಗಿದ್ದು, ಮಹಾರಾಷ್ಟ್ರದ ಕೊಯ್ನಾ ಪ್ರದೇಶದಲ್ಲೂ ಮಳೆ ಇಲ್ಲದ ಕಾರಣ ನೀರು ಬಿಡಿಸುವುದು ಕಷ್ಟಕರವಾಗಿದೆ. ಈ ಕುರಿತು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತುರ್ತು ನೀರಿನ ಪೂರೈಕೆಗೆ 22 ಲಕ್ಷ ರೂ. ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅಗತ್ಯವಿರುವ ಗ್ರಾಮಗಳಿಗೆ ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೆ, ಸಾವಳಗಿ, ಕುಲಗೋಡ ಸೇರಿ ಹಲವು ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿದ್ದು, ನಗರದಲ್ಲೂ ಪ್ರಮುಖ ರಸ್ತೆ ಕಾಮಗಾರಿಗಳು ಶೀಘ್ರ ಆರಂಭವಾಗಲಿವೆ. ಮರೆಗುದ್ದಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಿದರು.
ಅಜಯ ಕಡಪಟ್ಟಿ, ಮಲ್ಲು ದಾನಗೊಂಡ, ಶ್ರೀಧರ ಕಂಬಿ ಇದ್ದರು.