ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಬುಧವಾರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಅವರಿಗೆ ಮನವಿ ಸಲ್ಲಿಸಿದರು.
- ಜಿಲ್ಲಾಧಿಕಾರಿ ಮುಖಾಂತರ ಸಿಎಂ, ಪಿಎಂಗೆ ಮನವಿ
- ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ
ರೈತರು ಬೆಳೆದ ಎಲ್ಲ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಆಧಾರಿತ ಲಾಭದಾಯಕ ಬೆಲೆ ನಿಗದಿಪಡಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ರೈತರು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಅವರಿಗೆ ಸಲ್ಲಿಸಿದರು.
ಕಬ್ಬು ಬೆಳೆಗಾರರಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ದೊರಕುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರ ಆದಾಯ ಹಾಗೂ ಕೃಷಿಯ ಸ್ಥಿರತೆಗೆ ಸರ್ಕಾರಗಳು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬಿತ್ತನೆ ಮಾಡಿರುವ ವಿವಿಧ ಬೆಳೆಗಳ ಬೀಜಗಳು ಸಮರ್ಪಕವಾಗಿ ಮೊಳಕೆಯೊಡೆಯದೆ ಹಾನಿಗೊಳಗಾಗಿವೆ. ಬಿತ್ತನೆಗಾಗಿ ಸಾಲಸೂಲ ಮಾಡಿ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಬಾಗಲಕೋಟೆ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯಾಗಿ ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಹಾಗೂ ನೆರವು ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ನದಿಯಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ಏತ ನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸದಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಕೃಷಿ ಬೆಳೆಗಳನ್ನು ಉಳಿಸಲು ಅಗತ್ಯವಿರುವ ಕಡೆ ತಕ್ಷಣ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ರಸಗೊಬ್ಬರ ಮತ್ತು ಕೀಟ ನಾಶಕಗಳನ್ನು ನ್ಯಾಯಯುತ ಎಫ್‌ಆರ್‌ಪಿಯಲ್ಲಿ ರೈತರಿಗೆ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಒಂದು ಗೊಬ್ಬರ ಖರೀದಿಸುವಾಗ ಮತ್ತೊಂದು ಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸುವಂತೆ ವಿತರಕರು ಒತ್ತಾಯಿಸುವುದನ್ನು ನಿಲ್ಲಿಸಲು ಕ್ರಮ ಜರುಗಿಸಬೇಕು. ಈಗಾಗಲೇ ಬಿತ್ತನೆ ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ಮುಖಂಡರಾದ ಅಶೋಕ ಮಂತ್ರಿ, ಅಜಿತ ನಾಯ್ಕ, ರುದ್ರಗೌಡ ಪಾಟೀಲ, ಶಾಂತಯ್ಯ ಪಂಚಗಟ್ಟಿಮಠ, ಚನ್ನಪ್ಪ ಮಾಚಕನೂರ, ರಮೇಶ ಸಾರವಾಡ ಮಲ್ಲಪ್ಪ ಅವಟಿ, , ಪ್ರಭಾವತಿ ಸೊನ್ನ, ಸಾವಿತ್ರಿ ಕೋಟಿ, ರಾಜೇಶ್ವರಿ ಮರೆಣ್ಣಿ ಇತರರು ಇದ್ದರು.
ರೈತ ಬದುಕಿದರೆ ದೇಶ ಬದುಕುತ್ತದೆ. ರೈತರ ಸಮಸ್ಯೆಗಳನ್ನು ಕಡೆಗಣಿಸಿದರೆ ಕೃಷಿ ಕ್ಷೇತ್ರವೇ ಸಂಕಷ್ಟಕ್ಕೆ ಸಿಲುಕಲಿದೆ. ಅನ್ನದಾತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ, ನೀರಾವರಿ ಸೌಲಭ್ಯ, ಅಗತ್ಯ ಕೃಷಿ ಪರಿಕರಗಳು ಹಾಗೂ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿ.
— | ವಿರೂಪಾಕ್ಷಯ್ಯ ಹಿರೇಮಠ, ಜಿಲ್ಲಾ ಅಧ್ಯಕ್ಷ, ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ.