ಗುಳೇದಗುಡ್ಡ ಸಮೀಪದ ಪರ್ವತಿ ಗ್ರಾಮದಲ್ಲಿನ ಶ್ರೀ ಪರ್ವತೇಶ ದೇವಸ್ಥಾನ ಕಟ್ಟಡದ ಜೀರ್ಣೋದ್ಧಾರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮಾತನಾಡಿದರು. 
ಬಾಗಲಕೋಟೆ

ಧರ್ಮ, ಜ್ಞಾನ ಮಾರ್ಗದಿಂದ ಆತ್ಮೋದ್ಧಾರ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಉತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥರಿಂದ ಆಶೀರ್ವಚನ
  • ಸಂಧ್ಯಾವಂದನೆ-ಗಾಯತ್ರಿ ಜಪ ನಿತ್ಯ ಆಚರಿಸಿ
  • ಸುವರ್ಣ ಮಹೋತ್ಸವ
ಗುಳೇದಗುಡ್ಡ: ಜ್ಞಾನದ ಪ್ರಕಾಶವನ್ನು ಕೊಟ್ಟವರು ಆಂಜನೇಯ. ಆ ಜ್ಞಾನವನ್ನು ಕೊಟ್ಟ ಉಪಕಾರಕ್ಕೆ ಈ ಕಾರ್ತಿಕೋತ್ಸವ ನಡೆಯುತ್ತದೆ. ಪ್ರತಿಯೊಬ್ಬರು ಸಂಧ್ಯಾವಂದನೆ, ಗಾಯತ್ರಿ ಮಂತ್ರ ಜಪ ಮಾಡಬೇಕು. ಇದರಿಂದ ಪರಮಾತ್ಮನ ಅನುಗ್ರಹ ಸಾಧ್ಯವಾಗುತ್ತದೆ ಎಂದು ಉತ್ತರಾದಿಮಠದ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ಸಮೀಪದ ಪರ್ವತಿ ಗ್ರಾಮದಲ್ಲಿನ ಶ್ರೀ ಪರ್ವತೇಶ ದೇವಸ್ಥಾನ ಕಟ್ಟಡದ ಜೀರ್ಣೋದ್ಧಾರದ ಸುವರ್ಣ ಮಹೋತ್ಸವ ಹಾಗೂ ಶ್ರೀ ಪರ್ವತೇಶ್ವರ ದೇವರ ಕಾರ್ತಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇವಸ್ಥಾನದ ಕಟ್ಟಡದ ಸುವರ್ಣ ಮಹೋತ್ಸವ ನಡೆಸಿದ್ದೀರಿ, ಇದು ಸಂತಸದ ವಿಚಾರ. ಇಲ್ಲಿ ಇದರ ಜತೆಗೆ ಇನ್ನೊಂದು ಸುವರ್ಣಗಳ ಉತ್ಸವ ನಡೆಯಬೇಕಿದೆ. ಅದೇನೆಂದರೆ ಶಾಸಗಳ ಕೇಳುವ, ಪಾಠ ಪ್ರವಚನ ನಡೆಸುವ ಕಾರ್ಯ ನಡೆಯಬೇಕಿದೆ. ಗಾಯತ್ರಿ ಮಂತ್ರ ಜಪದಿಂದ ಮನುಷ್ಯ ಅಂದುಕೊಂಡಿದ್ದನ್ನು ಸಾಧಿಸಬಹುದು. ಸಮಸ್ಯೆಗಳ ಪರಿಹಾರವು ಸಾಧ್ಯವಾಗುತ್ತದೆ ಎಂದರು.
ಧರ್ಮ ಮಾರ್ಗ, ಜ್ಞಾನ ಮಾರ್ಗದಿಂದ ಪ್ರತಿಯೊಬ್ಬರು ನಡೆದಾಗ ಮಾತ್ರ ಆತ್ಮೋದ್ಧಾರವಾಗುತ್ತದೆ. 80 ವರ್ಷ ಪೂರೈಸಿದ ಹಿರಿಯರಿಗೆ ಸತ್ಕರಿಸಿ, ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ. ಹಿರಿಯರಿಗೆ ಗೌರವ ಕೊಡುವುದು ಒಳ್ಳೇ ಪ್ರವೃತ್ತಿ ಎಂದು ತಿಳಿಸಿದರು.
ಕೂಡ್ಲಗಿಯ ಶ್ರೀ 1008 ರಘು ವಿಜಯತೀರ್ಥ ಶ್ರೀಪಾದಂಗಳವರು ಮಾತನಾಡಿ, ಪರ್ವತೇಶನಿಗೆ ಬಂಗಾರ ಕಿರೀಟ ಮಾಡಿಸಿದ್ದೀರಿ, ಸುಂದರ ಅಲಂಕಾರ ಮಾಡಿದ್ದೀರಿ. ಅಲ್ಲದೇ ಈಗ ಚಿನ್ನದ ಹಸ್ತ ಮಾಡುವ ಪ್ರತಿಜ್ಞೆ ಮಾಡಿದ್ದೀರಿ ಇಷ್ಟು ಮಾಡಿದರೇ ಸಾಲದು ಪ್ರತಿಯೊಬ್ಬರು ನಿತ್ಯ ಸಂಧ್ಯಾವಂದನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅದು ಮುಖ್ಯ ಎಂದು ಹೇಳಿದರು.
ಉತ್ತರಾದಿಮಠದ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರು, ಕೂಡ್ಲಗಿಯ ಶ್ರೀ 1008 ರಘು ವಿಜಯತೀರ್ಥ ಶ್ರೀಪಾದಂಗಳವರು ಪಾದಪೂಜೆ, ಮುದ್ರಾಧಾರಣೆ, ಪರ್ವತೇಶನಿಗೆ ಪಂಚಾಮೃತ ಅಭಿಷೇಕ, ದಿಗ್ವಿಜಯ ರಾಮದೇವರ ಸಂಸ್ಥಾನ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನೆರವೇರಿಸಿದರು.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ 80 ವರ್ಷ ಮೇಲ್ಪಟ್ಟ ಸೇವಾಕರ್ತರಿಗೆ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು. ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಗೋಪಾಲರಾವ ಕಾರಕೂನ, ಕಮಿಟಿ ಅಧ್ಯಕ್ಷ ಸಂಜಯ ಕಾರಕೂನ ಆನಂದ ನರೆಗಲ್ಲ, ತಮ್ಮಣ್ಣ ಅಂಬೇಕರ, ಕೃಷ್ಣಾಮೂರ್ತಿ ಕಾರಕೂನ, ಗುರುರಾಜ ಪರ್ವತಿಕರ, ರವಿ ನರೇಗಲ್ಲ ಇತರರಿದ್ದರು.