ಮಹಾಲಿಂಗಪುರ ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಗಿರೀಶ ಸ್ವಾದಿ ಅವರಿಗೆ ಮನವಿ ಸಲ್ಲಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಗಂಗಾಧರ ಮೇಟಿ, ನಿಂಗಪ್ಪ ಬಾಳಿಕಾಯಿ, ನಿಂಗಪ್ಪ ಬಾಳಿಕಾಯಿ, ವಿರೇಶ ಆಸಂಗಿ, ಪರಪ್ಪ ಬ್ಯಾಕೋಡ, ಚಿನ್ನು ದೇಸಾಯಿ, ಹನಮಂತ ಜಮಾದಾರ, ಸಿದ್ದು ಶಿರೋಳ, ಭೀಮಶಿ ಸಸಾಲಟ್ಟಿ ಇತರರಿದ್ದರು. 
ಬಾಗಲಕೋಟೆ

ಮಹಾಲಿಂಗಪುರ ತಾಲೂಕು ರಚನೆಗೆ ಸತ್ಯಾಗ್ರಹ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಗಿರೀಶ ಸ್ವಾದಿ ಹೇಳಿಕೆ
  • 1500 ದಿನ ಪೂರೈಸಿದ ತಾಲೂಕು ರಚನೆಗಾಗಿ ಧರಣಿ ಸತ್ಯಾಗ್ರಹ
  • ಸರ್ಕಾರದ ಅಂಗಳಕ್ಕೆ ವರದಿ ಸಲ್ಲಿಕೆ
ಮಹಾಲಿಂಗಪುರ: ನೂತನ ಮಹಾಲಿಂಗಪುರ ತಾಲೂಕು ರಚನೆಗೆ ಸಂಬಂಸಿದಂತೆ ಅಗತ್ಯ ಹಳ್ಳಿಗಳು ಹಾಗೂ ಭೌಗೋಳಿಕ ವಿವರಗಳನ್ನು ಒಳಗೊಂಡ ವರದಿ ಕಂದಾಯ ಇಲಾಖೆಗೆ ಸಲ್ಲಿಸಲಾಗಿದೆ ಎಂದು ರಬಕವಿ-ಬನಹಟ್ಟಿ ತಹಸೀಲ್ದಾರ್‌ ಗಿರೀಶ ಸ್ವಾದಿ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ತಾಲೂಕು ಹೋರಾಟಗಾರರು ತಾಲೂಕು ರಚನೆಗಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು 1500 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಹೋರಾಟಗಾರರಿಂದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಕ್ಕೆ ಸಕಾರಾತ್ಮಕ ವರದಿ ಕಳುಹಿಸಲಾಗಿದ್ದು, ಮುಂದಿನ ಕ್ರಮ ಸರ್ಕಾರದ ಮಟ್ಟದಲ್ಲಿದೆ. ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವುದು. ಅಲ್ಲಿಯರೆಗೆ ತಾಳ್ಮೆ ವಹಿಸಿರಿ ಎಂದು ಹೇಳಿದರು.
ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಂಗಪ್ಪ ಹಲ್ಲಿ ಮತ್ತು ಆಮ್ ಆದ್ಮಿ ಪಕ್ಷದ ತೇರದಾಳ ಮತ ಕ್ಷೇತ್ರದ ಮುಖಂಡ ಅರ್ಜುನ ಹಲಗಿಗೌಡರ ಜಂಟಿಯಾಗಿ ಮಾತನಾಡಿ, ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಮುಖಂಡರು, ಸಾರ್ವಜನಿಕರು ಸೇರಿ ಜಾತಕ ಪಕ್ಷಿಯಂತೆ ಕಾಯುತ್ತಾ ಮಹಾಲಿಂಗಪುರ ನೂತನ ತಾಲೂಕಿಗಾಗಿ ಹೋರಾಟವನ್ನು ಮುಂದುವರಿಸುತ್ತಾ ಬಂದಿದ್ದೇವೆ. ಸರ್ಕಾರ ಈ ಕುರಿತು ನಿರ್ಲಕ್ಷವಹಿಸಿದ್ದು ತರವಲ್ಲ. ಕೂಡಲೇ ತಾಲೂಕು ಘೋಷಣೆ ಮಾಡಲಿ ಎಂದರು.
ಯಾವುದೇ ವಾಮ ಮಾರ್ಗ ಬಳಸದೆ ಸಂವಿಧಾನ ಬದ್ಧವಾಗಿಯೇ ನಮ್ಮ ಹಕ್ಕನ್ನು ಕೇಳುತ್ತ, ಶಾಂತ ರೀತಿಯಿಂದ ಇಲ್ಲಿವರೆಗೆ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಖ್ಯಮಂತ್ರಿಗಳು ನಮ್ಮ ಹೋರಾಟಕ್ಕೆ ಬೆಲೆ ನೀಡಿ ಆದಷ್ಟು ಬೇಗ ಮಹಾಲಿಂಗಪುರ ನೂತನ ತಾಲೂಕು ಘೋಷಣೆ ಮಾಡಿ ದೇಶದ ಸಂವಿಧಾನದ ಘನತೆ ಗೌರವವನ್ನು ಎತ್ತಿ ಹಿಡಿಯಬೇಕು ಎಂದರು.
ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿದರು.
ಹೋರಾಟಗಾರರು ಪಿಕೆಪಿಎಸ್ ಜಾಗೆಯಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಜನಸಂದಣಿ ಹೆಚ್ಚಿರುವ ಪ್ರದೇಶವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ತಪ್ಪಿಸಲು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಹೋರಾಟಗಾರರಾದ ನಿಂಗಪ್ಪ ಬಾಳಿಕಾಯಿ, ವಿರೇಶ ಆಸಂಗಿ, ಪರಪ್ಪ ಬ್ಯಾಕೋಡ, ಚಿನ್ನು ದೇಸಾಯಿ, ಹನಮಂತ ಜಮಾದಾರ, ಸಿದ್ದು ಶಿರೋಳ, ಭೀಮಶಿ ಸಸಾಲಟ್ಟಿ, ದುಂಡಪ್ಪ ಜಾಧವ, ರಫೀಕ್ ಮಾಲದಾರ, ನ್ಯಾ. ಎಂ.ಕೆ.ಸಂಗಣ್ಣವರ, ದುಂಡಪ್ಪ ಇಟ್ನಾಳ, ಮಹಾಲಿಂಗಪ್ಪ ಅವರಾದಿ, ಕರೆಪ್ಪ ಮೇಟಿ, ಶಂಕರ ಸೈದಾಪುರ, ಮೋಹ್ಮದ್ ಪೆಂಡಾರಿ, ಮಹಾದೇವ ಉತೂರ, ರೇಹ್ಮಾನ್ ಲಕ್ಕುಂಡಿ, ಸುನೀಲ ಮೇಟಿ, ಪ್ರಭುಲಿಂಗ ಕಲ್ಮಠ, ಶಂಕರ ಹುಕ್ಕೇರಿ, ಗಿರಿಶ ಜಮಖಂಡಿ, ಸುಭಾಶ ಜಂಬಗಿ ಮುಂತಾದವರು ಭಾಗಿಯಾಗಿದ್ದರು.