ಬಾಗಲಕೋಟೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಉದ್ಘಾಟಿಸಿದರು. ಕೆ. ದುರ್ಗಾದಾಸ, ಬಿ.ಜಿ. ಓತಗೇರಿ, ಪಿ.ಎಚ್. ನಾರಾಯಣಕರ ಮತ್ತಿತರರು ಇದ್ದರು. 
ಬಾಗಲಕೋಟೆ

ವಾಹನ ಚಾಲನೆಯಲ್ಲಿ ಸುರಕ್ಷತೆ ಮುಖ್ಯ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಚಂದ್ರಶೇಖರ ದಿಡ್ಡಿ ಹೇಳಿಕೆ
  • ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026
  • ಜೀವ ಅಮೂಲ್ಯವಾಗಿದ್ದು, ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು
ಬಾಗಲಕೋಟೆ: ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕಾದರೆ ಸಾರಿಗೆ ನಿಯಮಗಳ ಪಾಲನೆ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಹೇಳಿದರು.
ನವನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವ ಅಮೂಲ್ಯವಾಗಿದ್ದು, ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಸಾಫ್ಟ್‌ವೇರ್ ಇಂಜಿನಿಯರ್ ದಂಪತಿ ಮದುವೆಯಾಗಿ ಎರಡೂವರೆ ತಿಂಗಳಲ್ಲಿ ರಸ್ತೆ ದುರಂತದಲ್ಲಿ ಅಂಗವೈಕಲ್ಯಗೊಂಡ ಸ್ಥಿತಿ ಬಗ್ಗೆ ಉದಾಹರಣೆ ಮೂಲಕ ತಿಳಿಸಿದರು.
ವಾಹನ ಚಲಾವಣೆಯಲ್ಲಿ ಸುರಕ್ಷತೆ ಮುಖ್ಯವಾಗಿರುತ್ತದೆ. ಐಟಿಎಂಎಸ್ ಬಂದ ಮೇಲೆ ಹೆಲ್ಮೆಟ್ ಹಾಕಿಕೊಳ್ಳುವ ಸಂಖ್ಯೆ ಹೆಚ್ಚಾಗಿದೆ. ಆದರೂ ಸಹ ನಮ್ಮ ಜವಾಬ್ದಾರಿಯನ್ನು ನಾವು ಮರೆಯುವಂತಿಲ್ಲ. ಲೈಸನ್ಸ್ ಇಲ್ಲದೇ ಮಕ್ಕಳಿಗೆ ವಾಹನ ಚಲಾವಣೆ ಮಾಡಲು ಅವಕಾಶ ನೀಡಬಾರದು. ಮೊದಲು ನಾವು ಬದಲಾವಣೆಗೊಂಡಾಗ ಮಾತ್ರ ಸಮಾಜ ಬದಲಾವಣೆಗೊಳ್ಳುತ್ತದೆ ಎಂದರು.
ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕೆ.ದುರ್ಗಾದಾಸ ಮಾತನಾಡಿ, ದೇಹ ನಮ್ಮದು ಆತ್ಮ ನಮ್ಮದಲ್ಲ. ಆತ್ಮ ಇಲ್ಲದಿದ್ದರೆ ದೇಹಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಅದೇ ರೀತಿ ವಾಹನ ನಮ್ಮದು. ಆದರೆ ರಸ್ತೆ ನಮ್ಮದಲ್ಲ. ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕಾಗುತ್ತದೆ. ಸಂಚಾರಿ ನಿಯಮ ಪಾಲಿಸದೇ ಇರುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿಸಿದರು.
ಸಂಚಾರಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ ಬಿ.ಜಿ. ಓತಗೇರಿ ಮಾತನಾಡಿ, ಜೀವ ಬಹಳ ಮುಖ್ಯವಾಗಿದ್ದು, ವಾಹನ ಸಾಧನ ಆಗಬೇಕೆ ಹೊರತು ಮರಣ ಆಗಬಾರದು. ವಾಹನಗಳಿಗೆ ದಾಖಲಾತಿ, ವಿಮೆ ಸೇರಿ ಇತರೆ ದಾಖಲಾತಿಗಳು ಮುಖ್ಯವಾದರೆ, ವ್ಯಕ್ತಿಗೆ ಹೆಲ್ಮೆಟ್, ಲೈಸನ್ಸ್ ಮುಖ್ಯವಾಗುತ್ತದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಬಾರದು. ಅಪಘಾತವಾದರೆ ಅಂಗವಿಕಲರಾಗಿ ಕುಟುಂಬಕ್ಕೆ ಭಾರ ಆಗುವುದರ ಜೊತೆಗೆ ಸಾಮಾಜದಲ್ಲಿ ನಿಂದನೆಗೆ ಒಳಗಾಗಬೇಕಾಗುತ್ತದೆ. ಉತ್ತಮ ಚಾಲಕನಿಗೆ ಜವಾಬ್ದಾರಿ, ಏಕಾಗ್ರತೆ, ತಾಳ್ಮೆ ಮುಖ್ಯವಾಗಿವೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಪಿ.ಎಚ್. ನಾರಾಯಣಕರ ಮಾತನಾಡಿ ಸಾರಿಗೆಯು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಯಾವ ದೇಶ ಉತ್ತಮ ಸಾರಿಗೆ ಹೊಂದಿರುತ್ತದೆ. ಆ ದೇಶ ಅಭಿವೃದ್ಧಿ ಹೊಂದುತ್ತದೆ. ಇದರ ಜೊತೆಗೆ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಗದ್ದಿ, ಹಿರಿಯ ಮೋಟಾರ ವಾಹನ ನಿರೀಕ್ಷಕರಾದ ಎಂ.ಎಸ್. ಬಿರಾದಾರ, ಪರಮಾನಂದ ಸಜ್ಜನ, ರೇಖಾ ಭಜಂತ್ರಿ, ಅಶ್ವಿನಿ ಬಡಿಗೇರ, ಕಚೇರಿ ಅಧೀಕ್ಷಕ ಅಮರೇಶ ನಾಶಿ ಇತರರು ಉಪಸ್ಥಿತರಿದ್ದರು.