ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದಲ್ಲಿ ಸದಾಶಿವ ಶ್ರೀಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶಿವಯೋಗ ಮಂದಿರ ಸಂಸ್ಥೆ ಉಪಾಧ್ಯಕ್ಷ ಸದಾಶಿವ ಶ್ರೀಗಳು ಮಾತನಾಡಿದರು. ಘೋಡಗೇರಿ ವಿರಕ್ತಮಠದ ಕಾಶಿನಾಥ ಶ್ರೀಗಳು, ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಹಾಗೂ ವಟುಗಳು ಇದ್ದರು. 
ಬಾಗಲಕೋಟೆ

ಶಿವಯೋಗ ಮಂದಿರಕ್ಕೆ ಸದಾಶಿವ ಶ್ರೀಗಳ ಕೊಡುಗೆ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ಸಂಸ್ಥೆ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳ ಅಭಿಮತ
  • ಲಿಂ.ಹಾನಗಲ್ಲ ಕುಮಾರ ಶಿವಯೋಗಿಗಳು ಸ್ಮರಣೀಯರು
  • ಸದಾಶಿವ ಶ್ರೀಗಳ 42ನೇ ಪುಣ್ಯ ಸ್ಮರಣೋತ್ಸವ
ಬಾದಾಮಿ: ನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜ ಸೇವಾ ಕ್ಷೇತ್ರಗಳಿಗೆ ಹೆಸರಾದ ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಗೆ ಸದಾಶಿವ ಶ್ರೀಗಳ ಕೊಡುಗೆ ಅನನ್ಯ, ಅನುಕರಣೀಯ. ಇಂತಹ ಸಂಸ್ಥೆ ಸ್ಥಾಪಿಸಿದ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ಸದಾ ಸ್ಮರಣೀಯರು ಎಂದು ಶಿವಯೋಗ ಮಂದಿರ ಸಂಸ್ಥೆ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಶಿವಯೋಗ ಮಂದಿರದಲ್ಲಿ ಸೋಮವಾರ ಶ್ರೀ ಮದ್ವೀರಶೈವ ಶಿವಯೋಗ ಮಂದಿರದ ಸಂಸ್ಥಾಪಕ ಶಿವಯೋಗಸಿರಿ, ತಪೋಧನರಾದ ಸದಾಶಿವ ಶ್ರೀಗಳ 42ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸಂಸ್ಥೆಯ ಸಂಚಾಲಕರಾಗಿ, ವಟು ಸಾಧಕರಿಗೆ ಮಾತೃ ವಾತ್ಸಲ್ಯ ತೋರಿ ವಿದ್ಯಾ ಸಂಸ್ಕಾರ ನೀಡಿದ ಲಿಂ. ಹಾನಗಲ್ಲ ಸದಾಶಿವ ಶಿವಯೋಗಿಗಳು ತಮ್ಮ ಗುರುವರ್ಯರ ಮನೋಇಂಗಿತ ಅರಿತು, ಮಂದಿರದ ವಟು ಸಾಧಕರನ್ನು ಸಮಾಜ ಹಾಗೂ ಧರ್ಮಮುಖಿ ಮಠಾಧೀಶರನ್ನಾಗಿ ಮಾಡಲು ಶ್ರಮಿಸಿದರು. ಅವರಲ್ಲಿ ವಿದ್ಯಾ ಸಂಸ್ಕಾರ ಹಾಗೂ ಸಂಸ್ಕೃತಿ ರೂಪಿಸಲು ತಮ್ಮ ಬದುಕನ್ನು ಶ್ರೀಗಂಧದಂತೆ ತೇಯ್ದರು, ಮಂದಿರವೇ ಅವರ ಉಸಿರಾಯಿತು. ಭಕ್ತರ ಸದಾಶಯಕ್ಕೆ ಸ್ಪಂದಿಸಿದರು ಎಂದರು.
ಘೋಡಗೇರಿ ವಿರಕ್ತಮಠದ ಕಾಶಿನಾಥ ಶ್ರೀಗಳು, ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಸೇರಿ ಇತರರು ಇದ್ದರು. ಶಿವಯೋಗ ಮಂದಿರದ ಧರ್ಮದರ್ಶಿ ಎಂ.ಬಿ. ಹಂಗರಗಿ ಸ್ವಾಗತಿಸಿದರು.
ದ್ವಜಾರೋಹಣ: ಸೋಮವಾರ ಬೆಳಗ್ಗೆ 10.30 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಿತು. ನಂತರ ವಿವಿಧ ಸಂಗೀತ ವಾದ್ಯಗಳ ಮೂಲಕ ಸದಾಶಿವ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ನಂತರ ಮಹಾ ದಾಸೋಹ ಸೇವೆ, ಪುಷ್ಪಾಲಂಕಾರ ಸೇವೆ ನಡೆಯಿತು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಪಂಪಣ್ಣ ಕಾಚೆಟ್ಟಿ, ಡಾ. ಆರ್.ಸಿ. ಭಂಡಾರಿ, ಮುಕ್ಕಣ್ಣ ಜನಾಲಿ, ನಿಂಗನಗೌಡ ಜನಾಲಿ, ಮಾನಗೌಡ ಜನಾಲಿ, ಇಷ್ಟಲಿಂಗ ಶಿರಶಿ, ಬಿ.ವಿ. ಭಂಡಾರಿ ಇದ್ದರು.