ಬನಹಟ್ಟಿಯ ಸಮಾಜ ಮಂದಿರದಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಕಲಾವಿದರು ಹಾಗೂ ಸಂಗೀತಾಸಕ್ತರು ಪುಷ್ಪನಮನ ಸಲ್ಲಿಸಿದರು. ಮಹಾಲಿಂಗಯ್ಯ ಮಠದ, ಅಶೋಕ ಕರಲಟ್ಟಿ, ಅರುಣ ಹಳ್ಯಾಳ, ರಾಜು ಶೀಲವಂತ ಇತರರಿದ್ದರು. 
ಬಾಗಲಕೋಟೆ

ಭಾರತೀಯ ಸಂಗೀತಕ್ಕೆ ಎಸ್. ಜಾನಕಿ ನೀಡಿದ ಕೊಡುಗೆ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ಕಲಾವಿದ ಮಹಾಲಿಂಗಯ್ಯ ಮಠದ ಹೇಳಿಕೆ
  • ನುಡಿನಮನ ಕಾರ್ಯಕ್ರಮ
  • ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಅಗಲಿಕೆ ಭಾರತೀಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ
ರಬಕವಿ/ಬನಹಟ್ಟಿ: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಅಗಲಿಕೆ ಭಾರತೀಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂಗೀತರಾಗ ಸಂಸ್ಥೆಯ ಕಲಾವಿದ ಮಹಾಲಿಂಗಯ್ಯ ಮಠದ ಹೇಳಿದರು.
ಬನಹಟ್ಟಿಯ ಸಮಾಜ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಎಸ್. ಜಾನಕಿ ಅವರು ಸಂಗೀತ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಅವರ ಗಾಯನದ ಮಾಧುರ್ಯ, ಭಾವಪೂರ್ಣ ಅಭಿವ್ಯಕ್ತಿ ಹಾಗೂ ವಿಶಿಷ್ಟ ಶೈಲಿ ಅವರನ್ನು ಅಪ್ರತಿಮ ಹಿನ್ನೆಲೆ ಗಾಯಕಿಯಾಗಿ ರೂಪಿಸಿವೆ ಎಂದು ಹೇಳಿದರು.
ಅವರ ಹಾಡುಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಭಾವನೆ, ಭಕ್ತಿ, ಪ್ರೀತಿ ಹಾಗೂ ಜೀವನ ಮೌಲ್ಯಗಳನ್ನು ಜನಮನಕ್ಕೆ ತಲುಪಿಸಿದ ಅಮೂಲ್ಯ ಸಂಗೀತ ಸಂಪತ್ತಾಗಿವೆ. ಅವರ ಗಾಯನ ಭಾರತೀಯ ಸಂಗೀತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗೌರವ ತಂದುಕೊಟ್ಟಿದೆ ಎಂದು ಅವರು ತಿಳಿಸಿದರು.
ಸಂಗೀತಗಾರ ವಿನೋದ ಸುಟ್ಟಟ್ಟಿ ಮಾತನಾಡಿ, ಎಸ್. ಜಾನಕಿ ಅವರ ಅಗಲಿಕೆಯಿಂದ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ. ಆದರೆ ಅವರ ಅಮರ ಗೀತೆಗಳು ಸದಾ ಸಂಗೀತಾಸಕ್ತರ ಹದಯಗಳಲ್ಲಿ ಜೀವಂತವಾಗಿರಲಿದ್ದು, ಅವರ ಸಾಧನೆ ಮುಂದಿನ ಪೀಳಿಗೆಯ ಗಾಯಕರಿಗೆ ಸ್ಫೂರ್ತಿಯಾಗಲಿದೆ ಎಂದರು.
ಅಶೋಕ ಕರಲಟ್ಟಿ, ಅರುಣ ಹಳ್ಯಾಳ, ರಾಜು ಶೀಲವಂತ, ಬಸು ನುಚ್ಚಿ, ಅನೀಲ ಹಳ್ಯಾಳ, ಜಗದೀಶ ರಾಮಪೂರ, ರಾವಳ ಚಿಮ್ಮಡ, ರಾಜೇಶ್ವರಿ ಉಮದಿ, ಶಂಕರೆಮ್ಮ ಕಿತ್ತೂರ, ರೂಪಾ ಗಣೇಶನವರ ಸೇರಿದಂತೆ ಅನೇಕ ಗಾಯಕರು ಹಾಗೂ ಸಂಗೀತಾಸಕ್ತರು ಉಪಸ್ಥಿತರಿದ್ದು, ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.