ಬಾಗಲಕೋಟೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎನ್.ವಿ.ವಿಜಯ್ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು. 
ಬಾಗಲಕೋಟೆ

ರಸ್ತೆ ಸುರಕ್ಷತಾ ಮಾಸಾಚರಣೆ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಎನ್.ವಿ. ವಿಜಯ್ ಹೇಳಿಕೆ
  • ರಸ್ತೆ ಅಪಘಾತ ತಡೆಗೆ ಅರಿವು ಕಾರ್ಯಕ್ರಮ
  • ರಸ್ತೆ ಸುರಕ್ಷತಾ ಮಾಸಾಚರಣೆ ಅಭಿಯಾನ
ಬಾಗಲಕೋಟೆ: ಜಿಲ್ಲಾದ್ಯಂತ ಜ. 1 ರಿಂದ 31 ವರೆಗೆ ರಸ್ತೆ ಸುರಕ್ಷತಾ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎನ್.ವಿ. ವಿಜಯ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಸವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ, ಲೋಕೋಪಯೋಗಿ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸ್ತೆ ಅಪಘಾತದಲ್ಲಿ ರಾಜ್ಯದ ಅಂಕಿ ಸಂಖ್ಯೆಯನ್ನು ಅವಲೋಕನ ಮಾಡಿದಾಗ ರಾಜ್ಯದಲ್ಲಿ ಪ್ರಸಕ್ತ ವರ್ಷ ಮೊದಲ 6 ತಿಂಗಳಲ್ಲಿ 21,937 ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 5,975 ಸಾವುಗಳು ಸಂಭವಿಸಿವೆ. 27,456 ಹೆಚ್ಚಿನ ಪ್ರಮಾಣದಲ್ಲಿ ಗಾಯಗಳಾಗಿವೆ. ಇಂತಹ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅರಿವು ಮೂಡಿಸುವ ನಿಟ್ಟಿನಲ್ಲಿ ತಿಂಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮುಖ್ಯವಾಗಿ ವೇಗವಾಗಿ ಹೋಗುವುದು, ಕುಡಿದು ವಾಹನ ಚಲಾಯಿಸುವುದು, ರಸ್ತೆ ನಿಯಮ ಪಾಲನೆ, ಹೆಲ್ಮೆಟ್ ಧರಿಸದೇ ಇರುವುದು ಸೇರಿದಂತೆ ಇತರೆ ಕಾರಣಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಅಭಿಯಾನದ ರೂಪದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಅಭಿಯಾನದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ವಾಹನ ಅಪಘಾತವಾದ ಸಂದರ್ಭಗಳಲ್ಲಿ ನಗದು ರಹಿತ ಚಿಕಿತ್ಸೆ, ವಿಮಾ ಮೊತ್ತ ಪಾವತಿಗೆ ಸಂಬಂಧಿಸಿದಂತೆ ನಮೂನೆಗಳ ಭರ್ತಿ ಇನ್ನಿತರ ಅಂಶಗಳ ಕುರಿತು ತರಬೇತಿ, ಕಾರ್ಯಾಗಾರ, ಸೆಮಿನಾರ್, ಪ್ಯಾನಲ್ ಡಿಸ್ಕಷನ್, ರಹ್‌ವೀರ್, ಗುಡ್‌ಸಮರಿಟನ್ ಅವಾರ್ಡ್, ಗೋಲ್ಡನ್ ಅವರ್ ಬಗ್ಗೆ ಅರಿವು ಮತ್ತು ಮಾಸ್ಟರ್ ಟ್ರೈನರ್‌ಗಳಿಗೆ ಉನ್ನತ ಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಪಾಲುದಾರ ಇಲಾಖೆಗಳಾದ ಸಾರಿಗೆ, ಪೊಲೀಸ್, ಆರೋಗ್ಯ (ರೋಡ ಓನಿಂಗ್ ಏಜೆನ್ಸಿ)ಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಲಾಗುತ್ತದೆ ಎಂದರು.
ಮಾಸಾಚರಣೆ ಅವಧಿಯಲ್ಲಿ ಪರಿಣಾಮಕಾರಿ ಪ್ರವರ್ತನ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಸೇಪ್ಟಿ ಹಾರ್ನೆಸ್ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ರಚನೆ, ಕಿರು ನಾಟಕ, ಚಿತ್ರಕಲಾ ಸ್ಪರ್ಧೆ, ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಸುರಕ್ಷತೆಯ ಸ್ಲೋಗನ್‌ಗಳ ಪ್ರದರ್ಶನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.