ತೇರದಾಳ ತಾಲೂಕಿನ ಹನಗಂಡಿ ಗ್ರಾಮದ ಕೆರೆಗೆ ತಹಸೀಲ್ದಾರ್ ವಿಜಯಕುಮಾರ ಕಡಕೋಳ ಭೇಟಿ ನೀಡಿದರು. ಗ್ರಾಪಂ ಪಿಡಿಒ ಪಿ.ಪಿ. ರಾವಳ, ಗ್ರಾ.ಪಂ. ಮಾಜಿ ಸದಸ್ಯರಾದ ಧರೇಶ ಹುದ್ದಾರ, ಅಲ್ಲಾಬಕ್ಷ ಅಲಾಸ, ಶಂಕರ ಹುದ್ದಾರ ಇದ್ದರು. 
ಬಾಗಲಕೋಟೆ

ಕೆರೆಗೆ ನೀರು ಹರಿಸುವಂತೆ ಮನವಿ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಅನುದಾನ ಇಲ್ಲವೆಂದು ಅಧಿಕಾರಿ ಅಳಲು
  • ಪ್ರತಿಭಟನೆ ಎಚ್ಚರಿಕೆ
ತೇರದಾಳ : ಮುಂಗಾರು ಮಳೆ ಆರಂಭವಾಗಿ ತಿಂಗಳು ಗತಿಸಿದರೂ ಕೆರೆಗಳಿಗೆ ಈವರೆಗೆ ನೀರು ಹರಿಸಿಲ್ಲ ಎಂದು ತಾಲೂಕಿನ ಹನಗಂಡಿ ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯರಾದ ಧರೇಶ ಹುದ್ದಾರ, ಅಲ್ಲಾಬಕ್ಷ ಅಲಾಸ, ಶಂಕರ ಹುದ್ದಾರ ಆರೋಪಿಸಿದರು.
ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ತಹಸೀಲ್ದಾರ್ ವಿಜಯಕುಮಾರ ಕಡಕೋಳ ಅವರೊಂದಿಗೆ ಕೆರೆ ಆವರಣಕ್ಕೆ ಭೇಟಿ ನೀಡಿ ಮನವಿ ಮಾಡಿದರು. ಗ್ರಾಮದ ಕೆರೆಯಿಂದ ಕೃಷಿ, ಅಂತರ್ಜಲ, ಕುಡಿಯುವ ನೀರು, ದನ-ಕರುಗಳಿಗೆ ಸಾಕಷ್ಟು ಅಗತ್ಯವಿದೆ. ಕೂಡಲೇ ಘಟಪ್ರಭಾ ಎಡದಂಡೆ ಕಾಲುವೆಯಿಂದ ಹನಿ ನೀರು ಹರಿಸಬೇಕು. ಇಲ್ಲವಾದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೇಸಿಗೆ ಸಂದರ್ಭದಲ್ಲಿ ಖಾಲಿ ಆಗಿರುವ ಕೆರೆ ಮಳೆಗಾಲದಲ್ಲಿಯೂ ಖಾಲಿ ಹಾಗೆ ಉಳಿದಿದೆ. ಇದರಿಂದ ಜನ ಜಾನುವಾರುಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಈ ವರೆಗೆ ವಿವಿಧ ಇಲಾಖೆ ಅಧಿಕಾರಿಗಳು, ಕಚೇರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.
ಪಿಡಿಒ ಪ್ರಹ್ಲಾದ ರಾವಳ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಅನುದಾನವೇ ಇಲ್ಲ. ಕೂಲಿಕಾರರಿಗೆ ಸಂಬಳ ಕೊಡುವಷ್ಟು ಕೂಡ ಹಣ ಇಲ್ಲ ಎಂದು ತಹಸೀಲ್ದಾರ್ ಎದುರು ಅಳಲು ತೋಡಿಕೊಂಡರು.
ಗ್ರಾಮ ಆಡಳಿತಾಧಿಕಾರಿ ವಿರೇಶ ಗೋಕಾಕ, ಅಲ್ಲಪ್ಪ ಹಿಪ್ಪರಗಿ, ಕರೆಪ್ಪ ದಳವಾಯಿ ಇದ್ದರು.