ಬೀಳಗಿ ತಹಸೀಲ್ದಾರ ಕಾರ್ಯಾಲಯದ ಎದುರಿಗೆ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ರೈತ ಮುಖಂಡರಾದ ಈರಪ್ಪ ಹಂಚಿನಾಳ, ಸಿದ್ದಪ್ಪ ಬಳಗಾನೂರ, ಮಲ್ಲಪ್ಪ ಬಾವಿ, ಶಿವನಗೌಡ ಪಾಟೀಲ, ಡಿ.ಎಂ. ನದಾ, ಪರಶುರಾಮ ಮಂಟೂರ, ಸದಾಶಿವ ಆಗೋಜಿ, ರಾಜೇಂದ್ರ ಪಾಟೀಲ, ಗೋವಿಂದಪ್ಪ ಸೊಕನಾದಗಿ, ಬಸು ಹಲಕಿ, ಸಿದ್ದು ದುಲಾರಿ, ಎಂ. ಎಸ್. ಧೂಪದ ಇತರರಿದ್ದರು.
- ಮತ್ತೆ ಹೋರಾಟದ ಎಚ್ಚರಿಕೆ ನೀಡಿದ ರೈತರು
- ತುರ್ತು ಸಭೆ ನಡೆಸಿದ ಅಧಿಕಾರಿಗಳು
- ಕಬ್ಬು ಬೆಳೆಗಾರರಿಗೆ ಯಾವುದೇ ಕಾರ್ಖಾನೆ ಕಬ್ಬು ಕಳುಹಿಸುವ ಹಕ್ಕು ಇದೆ.
ಬೀಳಗಿ: ತಾಲೂಕಿನ ಕುಂದರಗಿ ಜೆಮ್ ಸಕ್ಕರೆ ಕಾರ್ಖಾನೆ ಮತ್ತು ಬೀಳಗಿ ಸಕ್ಕರೆ ಕಾರ್ಖಾನೆಯವರು ಸರ್ಕಾರದ ಆದೇಶದ ಪ್ರಕಾರ 3,300 ರೂ. ಘೋಷಣಾ ಪತ್ರ ಬಿಡುಗಡೆಗೊಳಿಸದಿದ್ದರೆ ಮತ್ತೆ ಬೀದಿಗಳಿದು ಹೋರಾಟ ಮಾಡಲಾಗುವುದು ಎಂದು ರೈತ ಪರ ಸಂಘಟನೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ಸಭೆ ಜರುಗಿತು.
ಎಸಿ ಶ್ವೇತಾ ಬೀಡಿಕರ ನೇತೃತ್ವದಲ್ಲಿ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ರೈತರ ಮುಖಂಡರೊಂದಿಗೆ ಸಭೆ ನಡೆಯಿತು. ರೈತ ಮುಖಂಡರು ಎರಡು ಕಾರ್ಖಾನೆಯವರು 3,300 ದರ ನಿಗದಿ ಮಾಡಲೆಬೇಕು ಅಂತ ಪಟ್ಟು ಹಿಡಿದರು. ಕಾರ್ಖಾನೆಯವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಖಾನೆಯವರು ಸರ್ಕಾರ ನಿಗದಿ ಪಡಿಸಿದ ದರವನ್ನು ಮಾತ್ರ ಕೊಡಲು ಒಪ್ಪಿದ್ದು, ಹೆಚ್ಚಿನ ದರ ಕೊಡಲು ನಿರಾಕರಿಸಿದ್ದಾರೆ. ಕಬ್ಬು ಬೆಳೆಗಾರರಿಗೆ ಯಾವುದೇ ಕಾರ್ಖಾನೆ ಕಬ್ಬು ಕಳುಹಿಸುವ ಹಕ್ಕು ಇದೆ. ಇದಕ್ಕೆ ನಿರ್ಬಂಧವಿಲ್ಲ. ಹೆಚ್ಚಿನ ದರ ನೀಡುವ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುತ್ತೇವೆ. ನ. 22ರೊಳಗೆ ಜಿಲ್ಲಾಧಿಕಾರಿಗಳು ಕಾರ್ಖಾನೆ ಮಾಲೀಕರೊಂದಿಗೆ ಚರ್ಚೆ ಮಾಡಿ 3,300 ರೂ. ದರ ನಿಗಧಿ ಪಡಿಸಬೇಕು ಎಂದು ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಸಂಗಪ್ಪ ಎಂ. ಅವರೊಂದಿಗೆ ಮಾತನಾಡುತ್ತೇನೆ ಎಂದು ಎಸಿ ಶ್ವೇತಾ ಬೀಡಿಕರ ಸಭೆ ಮುಕ್ತಾಯಗೊಳಿಸಿದರು.
ತಹಸೀಲ್ದಾರ ವಿನೋದ ಹತ್ತಳ್ಳಿ, ಡಿವೈಎಸ್‌ಪಿ ಗಜಾನನ ಸುತಾರ, ಸಿಪಿಐ ಹನಮಂತ ಸಣಮನಿ ಮತ್ತು ರೈತ ಮುಖಂಡರು ಇದ್ದರು.
ಮುಧೋಳಕ್ಕೆ ಮಾತ್ರ ಉಸ್ತುವಾರಿ ಸಚಿವ
ಬೀಳಗಿ : ತಾಲೂಕಿನ ಕುಂದರಗಿ ಜೆಮ್ ಸಕ್ಕರೆ ಕಾರ್ಖಾನೆ ಮತ್ತು ಬೀಳಗಿ ಸಕ್ಕರೆ ಕಾರ್ಖಾನೆಯವರು ಸರ್ಕಾರದ ಆದೇಶದ ಪ್ರಕಾರ 3300 ರೂ. ಘೋಷಣಾ ಪತ್ರ ನ. 22ರೊಳಗೆ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ರೈತರು ಹೋರಾಟ ನಡೆಸಲು ನಿರ್ಧರಿಸಿದ್ದಾರೆ ಎಂದು ರೈತ ಹೋರಾಟಗಾರ ಈರಪ್ಪ ಹಂಚಿನಾಳ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಜಮಖಂಡಿ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಡೆದ ಬಳಿಕ ಮಾತನಾಡಿದ ಅವರು, ಎ್ಆರ್‌ಪಿ ದರವನ್ನು ಮುಧೋಳ ಮತ್ತು ಜಿಲ್ಲೆಯ ರೈತರು ಎಂದೂ ಒಪ್ಪಿಕೊಂಡಿಲ್ಲ. ಹೀಗಾಗಿ ಯೋಗ್ಯದರವನ್ನು ಪಡೆಯುತ್ತಾ ಬಂದಿದ್ದೇವೆ. ಆದ್ದರಿಂದ ಜಿಲ್ಲೆಯ ಎಲ್ಲ ಕಾರ್ಖಾನೆಯವರು 3300 ರೂ. ದರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ನ. 22 ರೊಳಗಾಗಿ 3,300 ದರ ಒಪ್ಪಿಕೊಳ್ಳದಿದ್ದರೆ ಅಂದಾಜು 10 ಸಾವಿರ ರೈತರು ಮನ್ನಿಕೇರಿ ಐಬಿಯಲ್ಲಿ ಸಭೆ ಸೇರಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇವೆ. ಪರಿಸ್ಥಿತಿ ಕೈ ಮೀರಿದರೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕಾಧ್ಯಕ್ಷ ಗಂಗಪ್ಪ ಮಾದರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಮಲತಾಯಿ ಧೋರಣೆ ಮಾಡಿದ್ದು ಸರಿಯಾದ ನಡೆಯಲ್ಲ. ಜಿಲ್ಲೆಯ ಎಲ್ಲ ಕಾರ್ಖಾನೆಗಳು ಏಕರೂಪದ ದರ ನಿಗದಿ ಮಾಡಿಸುವುದನ್ನು ಬಿಟ್ಟು ಕೇವಲ ಮುಧೋಳ ತಾಲೂಕಿನ 4 ಕಾರ್ಖಾನೆಗಳಿಗೆ 3,300 ದರ ಕೊಡಿಸುವ ಮೂಲಕ ಮುಧೋಳಕ್ಕೆ ಮಾತ್ರ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ಆರೋಪಿಸಿದರು.
ರೈತ ಮುಖಂಡರಾದ ಸಿದ್ದಪ್ಪ ಬಳಗಾನೂರ, ಮಲ್ಲಪ್ಪ ಬಾವಿ, ಶಿವನಗೌಡ ಪಾಟೀಲ, ಡಿ.ಎಂ. ನದಾ, ಪರಶುರಾಮ ಮಂಟೂರ, ಸದಾಶಿವ ಆಗೋಜಿ, ರಾಜೇಂದ್ರ ಪಾಟೀಲ, ಗೋವಿಂದಪ್ಪ ಸೊಕನಾದಗಿ, ಬಸು ಹಲಕಿ, ಸಿದ್ದು ದುಲಾರಿ, ಎಂ. ಎಸ್. ಧೂಪದ ಇದ್ದರು.