ಹಿಪ್ಪರಗಿ ಬ್ಯಾರೇಜ್‌ನಲ್ಲಿ ಸುಮಾರು 4 ಟಿಎಂಸಿ ನೀರು ಸಂಗ್ರಹವಾಗಿರುವ ದೃಶ್ಯ. 
ಬಾಗಲಕೋಟೆ

ಬ್ಯಾರೇಜ್‌ನಲ್ಲಿ ನೀರು ಸಂಗ್ರಹಕ್ಕೆ ಚೇತರಿಕೆ

ಪ್ರಮುಖ ಮುಖ್ಯಾಂಶಗಳು

  • ಕಳೆದ ಜ.6 ರಂದು ಗೇಟ್ ನಂ.22 ರಲ್ಲಿ ಸಂಭವಿಸಿದ ಪೆನಲ್ ಅವಘಡ
  • ಹಿಪ್ಪರಗಿ ಜಲಾಶಯದಿಂದ ಅರ್ಧದಷ್ಟು ನೀರು ಪೋಲಾಗಿತ್ತು.
  • ಬ್ಯಾರೇಜ್‌ನ ನೀರು ಸಂಗ್ರಹದಲ್ಲಿ ಕೊಂಚ ಚೇತರಿಕೆ
ರಬಕವಿ/ಬನಹಟ್ಟಿ: ಕಳೆದ ಜ.6 ರಂದು ಗೇಟ್ ನಂ.22 ರಲ್ಲಿ ಸಂಭವಿಸಿದ ಪೆನಲ್ ಅವಘಡದಿಂದಾಗಿ 6 ಟಿಎಂಸಿ ಸಾಮರ್ಥ್ಯದೊಂದಿಗೆ ಭರ್ತಿ ಹೊಂದಿದ್ದ ಸಮೀಪದ ಹಿಪ್ಪರಗಿ ಜಲಾಶಯದಿಂದ ಅರ್ಧದಷ್ಟು ನೀರು ಪೋಲಾಗಿತ್ತು. ಇದೀಗ ಬ್ಯಾರೇಜ್‌ನ ನೀರು ಸಂಗ್ರಹದಲ್ಲಿ ಕೊಂಚ ಚೇತರಿಕೆ ಕಂಡಿದ್ದು ಅಂದಾಜು 4 ಟಿಎಂಸಿಯಷ್ಟು ನೀರು ಗುರುವಾರದವರೆಗೆ ಸಂಗ್ರಹಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಬ್ಯಾರೇಜ್‌ಗೆ ಪ್ರತಿದಿನ ಸುಮಾರು 500 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಎಲ್ಲ 22 ಗೇಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಸಂಗ್ರಹಿತ ನೀರು ಬೇಸಿಗೆ ದಿನಗಳಲ್ಲಿ ಉಪಯುಕ್ತವಾಗಬೇಕಾದರೆ ಹಿನ್ನೀರಿನ ವ್ಯಾಪ್ತಿಯಲ್ಲಿರುವ ಗ್ರಾಮ ಹಾಗೂ ಪಟ್ಟಣಗಳ ಜನರು ಈಗಿನಿಂದಲೇ ನೀರನ್ನು ಮಿತವಾಗಿ ಬಳಸಬೇಕಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ನಿರ್ಲಕ್ಷೃ ವಹಿಸಿದರೆ ಬೇಸಿಗೆಯ ಮಧ್ಯಂತರದಲ್ಲಿ ನೀರಿನ ತೀವ್ರ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ನಡುವೆ ನೀರು ಪೋಲಾಗಿದ್ದ ಪ್ರಕರಣಕ್ಕೆ 25 ದಿನಗಳು ಕಳೆದರೂ ಮಹಾರಾಷ್ಟ್ರ ಸರ್ಕಾರದೊಂದಿಗೆ ಯಾವುದೇ ಅಧಿಕೃತ ಮಾತುಕತೆ ಅಥವಾ ಲಿಖಿತ ಮನವಿ ನಡೆಯದಿರುವುದು ಟೀಕೆಗೆ ಕಾರಣವಾಗಿದೆ. ಘಟನೆ ವೇಳೆ ರಾಜಕೀಯ ಚಟುವಟಿಕೆ ತೋರಿದ್ದ ಜನಪ್ರತಿನಿಧಿಗಳು ಈಗ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಬೇಸಿಗೆಯ ಕೊನೆಯ ಹಂತದಲ್ಲಿ ನೀರಿನ ರಾಜಕೀಯ ನಡೆಸುವುದನ್ನು ಬಿಟ್ಟು, ಆಡಳಿತ ಹಾಗೂ ವಿರೋಧ ಪಕ್ಷಗಳ ಜನಪ್ರತಿನಿಧಿಗಳು ಒಟ್ಟಾಗಿ ಮುಂದಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ರಾಜ್ಯಕ್ಕೆ ಬರಬೇಕಾದ 2 ಟಿಎಂಸಿ ನೀರಿನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.