ರಬಕವಿ ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕುರಿತು ಖಾಸಗಿ ನಿವಾಸಿ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಹಾಗೂ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಗಿರೀಶ ಸ್ವಾದಿ ಮಾಹಿತಿ ನೀಡಿದರು. ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ಇತರರಿದ್ದರು.
- ತಹಸೀಲ್ದಾರ್ ಗಿರೀಶ ಸ್ವಾದಿ ಸೂಚನೆ
- ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪೂರ್ವಭಾವಿ ಸಭೆ
- ರೈತರ ಜಮೀನುಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ನೈಜ ಬೆಳೆ ಮಾಹಿತಿಯನ್ನು ದಾಖಲಿಸಬೇಕು.
ರಬಕವಿ/ಬನಹಟ್ಟಿ: ಮುಂಗಾರು ಹಂಗಾಮು 2026-27ರ ಬೆಳೆ ಸಮೀಕ್ಷೆ ಕಾರ್ಯವನ್ನು ಸರ್ಕಾರದ ಮಾರ್ಗಸೂಚಿಯಂತೆ ನಿಖರವಾಗಿ ಹಾಗೂ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕುರಿತು ಖಾಸಗಿ ನಿವಾಸಿ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಹಾಗೂ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಳೆ ಸಮೀಕ್ಷೆ ಕಾರ್ಯದ ಮಹತ್ವ, ಮೊಬೈಲ್ ಆಪ್ ಬಳಕೆ, ಸ್ಥಳ ಪರಿಶೀಲನೆ, ಬೆಳೆಗಳ ನಿಖರ ಮಾಹಿತಿ ದಾಖಲಾತಿ ಹಾಗೂ ಸಮಯಪಾಲನೆಗೆ ಆದ್ಯತೆ ನೀಡಬೇಕು. ರೈತರ ಜಮೀನುಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ, ನೈಜ ಬೆಳೆ ಮಾಹಿತಿಯನ್ನು ದಾಖಲಿಸಬೇಕು. ಯಾವುದೇ ರೀತಿಯ ತಪ್ಪು ಮಾಹಿತಿಗೆ ಅವಕಾಶ ನೀಡದೇ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ಮಾತನಾಡಿ, ಬೆಳೆ ಸಮೀಕ್ಷೆ ಮಾಹಿತಿ ಆಧಾರದ ಮೇಲೆಯೇ ರೈತರಿಗೆ ಸರ್ಕಾರದ ವಿವಿಧ ಯೋಜನೆಗಳು, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಸೇರಿ ಹಲವು ಕೃಷಿ ಸೌಲಭ್ಯಗಳು ದೊರೆಯುತ್ತವೆ. ಹೀಗಾಗಿ ಪ್ರತಿಯೊಬ್ಬ ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ಸಮೀಕ್ಷೆ ಕಾರ್ಯ ನಿರ್ವಹಿಸಬೇಕು. ಬೆಳೆ ಸಮೀಕ್ಷೆ ವೇಳೆ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದರು. ಏನಾದರೂ ತೊಂದರೆಗಳಾದರೆ ಮೇಲಾಧಿಕಾರಿಗಳ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ರೈತರಿಗೆ ಯಾವುದೇ ತೊಂದರೆಯಾಗದ ಹಾಗೆ ಕಾರ್ಯನಿರ್ವಹಿಸಬೇಕು ಎಂದರು.
ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಖಾಸಗಿ ನಿವಾಸಿ ಸಿಬ್ಬಂದಿ ಉಪಸ್ಥಿತರಿದ್ದರು.