ಮುಧೋಳ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಲಾಯಿತು. ತಹಸೀಲ್ದಾರ್ ಡಾ. ಚಿಕ್ಕಪ್ಪ, ಎ.ಕೆ. ಇಂಡಿಕರ, ಸಂಗಮೇಶ ನೀಲಗುಂದ, ರಮೇಶ ನಿಡೋಣಿ ಇತರರಿದ್ದರು. 
ಬಾಗಲಕೋಟೆ

ದುಶ್ಚಟ ತ್ಯಜಿಸಿ ಆರೋಗ್ಯಕರ ಬದುಕು ಕಟ್ಟಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಹೇಳಿಕೆ
  • ಮುಧೋಳದಲ್ಲಿ ವ್ಯಸನಮುಕ್ತ ದಿನಾಚರಣೆ

ಮುಧೋಳ : ಸಮಾಜವನ್ನು ವ್ಯಸನಮುಕ್ತಗೊಳಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ದುಶ್ಚಟಗಳನ್ನು ತ್ಯಜಿಸಿ ಆರೋಗ್ಯಕರ ಹಾಗೂ ನೆಮ್ಮದಿಯ ಜೀವನವನ್ನು ರೂಪಿಸಿಕೊಳ್ಳುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು ಎಂದು ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ ಕರೆ ನೀಡಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಚಿತ್ತರಗಿ-ಇಲಕಲ್ ವಿಜಯ ಮಹಾಂತೇಶ ಸಂಸ್ಥಾನದ ಮಠಾಧೀಶ ಡಾ. ಮಹಾಂತ ಸ್ವಾಮಿಗಳವರ ಜನ್ಮದಿನದ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬನ್ನಿ, ನಿಮ್ಮ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕೋಣ, ಸುಂದರ ಜೀವನ ನಡೆಸೋಣ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ವ್ಯಸನಗಳಿಂದ ದೂರವಿರುವ ಮೂಲಕ ಕುಟುಂಬ ಹಾಗೂ ಸಮಾಜದ ಆರೋಗ್ಯ ಕಾಪಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಧಾರ್ಮಿಕ ಆಚರಣೆಗಳನ್ನು ಸಮಾಜಮುಖಿ ಚಟುವಟಿಕೆಗಳೊಂದಿಗೆ ಸಂಯೋಜಿಸುವ ಮೂಲಕ ಜನರಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಬೇಕೆಂದು ಹೇಳಿದರು.
ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿ, ಮುಧೋಳ ತಾಲೂಕನ್ನು ವ್ಯಸನಮುಕ್ತವಾಗಿಸಲು ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಉಪ ತಹಸೀಲ್ದಾರ್ ಎ.ಕೆ. ಇಂಡಿಕರ, ಬಿಆರ್‌ಪಿ ಸಂಗಮೇಶ ನೀಲಗುಂದ, ರಮೇಶ ನಿಡೋಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ ಮಲಘಾಣ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.