ಬಾಗಲಕೋಟೆ ಜಿಲ್ಲಾಽಕಾರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಕೈಗೊಳ್ಳಬೇಕಾದ ಬೆಳೆವಿಮೆ ಹಾಗೂ ಬೆಳೆ ಕಟಾವು ಪ್ರಯೋಗಗಳ ಕುರಿತು ಜಿಲ್ಲಾಮಟ್ಟದ ಜಂಟಿ ಸಮಿತಿ ಸಭೆ ಜಿಲ್ಲಾಽಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವಿಂದ್ರ ಹಕಾಟಿ, ಗೌರಮ್ಮ ಸುಂಕದ ರಾಜಕುಮಾರ ಇತರರಿದ್ದರು. 
ಬಾಗಲಕೋಟೆ

ಕಾಲಮಿತಿಯೊಳಗೆ ಬೆಳೆ ವಿಮಾ ಒದಗಿಸಿ

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ

ಜಿಲ್ಲೆಯ ಅರ್ಹ ರೈತರಿಗೆ ನಿಯಮಾನುಸಾರ ನ್ಯಾಯಸಮ್ಮತ ಬೆಳೆ ವಿಮಾ ಪರಿಹಾರವು ಯಾವುದೇ ಅನಗತ್ಯ ವಿಳಂಬವಿಲ್ಲದೆ ಕಾಲಮಿತಿಯೊಳಗೆ ದೊರೆಯುವಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಽಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಕೈಗೊಳ್ಳಬೇಕಾದ ಬೆಳೆವಿಮೆ ಹಾಗೂ ಬೆಳೆ ಕಟಾವು ಪ್ರಯೋಗಗಳ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜಂಟಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯ ಕೊರತೆ ಹಾಗೂ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳೆಹಾನಿ ಸಮೀಕ್ಷೆಯನ್ನು ಸಂಬಂಧಪಟ್ಟ ಇಲಾಖೆಗಳು ಜಂಟಿಯಾಗಿ ಕೈಗೊಳ್ಳಬೇಕು. ಕ್ಷೇತ್ರಗಳಿಗೆ ಭೇಟಿ ನೀಡಿ ನಿಗದಿತ ಸಮಯದೊಳಗೆ ಬೆಳೆ ಕಟಾವು ಪ್ರಯೋಗಗಳನ್ನು ಪೂರ್ಣಗೊಳಿಸಿ, ನಿಖರವಾದ ವರದಿ ಸಲ್ಲಿಸುವಂತೆ ಜಿಲ್ಲಾಽಕಾರಿಗಳು

ತಿಳಿಸಿದರು.

ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳುವ ಮುನ್ನ ಸ್ಥಳೀಯ ರೈತರು ಹಾಗೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿಯೇ ಸಂಪೂರ್ಣ ಪಾರದರ್ಶಕತೆಯಿಂದ ಪ್ರಯೋಗ ನಡೆಸಬೇಕು. ನಿಗದಿತ ವಿಧಾನ ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ಲೋಪದೋಷಗಳಿಗೆ ಅವಕಾಶ ನೀಡಬಾರದು.

ಬೆಳೆ ಕಟಾವು ಆಧಾರದ ಮೇಲೆ ದೊರೆಯುವ ಬೆಳೆ ಇಳುವರಿ ಮಾಹಿತಿಯನ್ನು ಅಂತಿಮ ಬೆಳೆ ವಿಮಾ ನಷ್ಟ ಪರಿಹಾರ ನಿರ್ಧಾರದಲ್ಲಿ ಪರಿಗಣಿಸಲಾಗುವುದರಿಂದ ಪ್ರಯೋಗಗಳ ನಿಖರತೆ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವಿಂದ್ರ ಹಕಾಟಿ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗೌರಮ್ಮ ಸುಂಕದ, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ ಸೇರಿ ವಿಮಾ ಕಂಪನಿಯ ಪ್ರತಿನಿಽಗಳು ಉಪಸ್ಥಿತರಿದ್ದರು.