ಮುಧೋಳದಲ್ಲಿ ನಡೆದ ಹೆಸ್ಕಾಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಆರ್.ಬಿ. ತಿಮ್ಮಾಪೂರ ಅವರನ್ನು ಸನ್ಮಾನಿಸಲಾಯಿತು. ಸದುಗೌಡ ಪಾಟೀಲ, ಅಶೋಕ ಕಿವಡಿ,ಎಂ.ಎಸ್. ಧೂತಿ, ರವೀಂದ್ರ ಮೆಟಗುಡ್ಡ, ವಿ.ಎನ್. ಮರಕಟ್ಟಿ, ಎಸ್.ಜೆ. ಕಲಕಂಬ, ಪಂಡಿತ ಹುನ್ನೂರ ಇತರರಿದ್ದರು.. 
ಬಾಗಲಕೋಟೆ

ರೈತರಿಗೆ ನಿರಂತರ ವಿದ್ಯುತ್ ಪೂರೈಸಿ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಆರ್.ಬಿ. ತಿಮ್ಮಾಪೂರ ತಾಕೀತು
  • ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ
ಮುಧೋಳ: ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಸಾರ್ವಜನಿಕರು ಹಾಗೂ ರೈತರ ದೂರುಗಳಿಗೆ ತಕ್ಷಣವೇ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಶಾಸಕ ಆರ್.ಬಿ. ತಿಮ್ಮಾಪೂರ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಹೆಸ್ಕಾಂ ಕಚೇರಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಕೃಷಿ ಚಟುವಟಿಕೆಗೆ ವಿದ್ಯುತ್ ಅತ್ಯಗತ್ಯವಾಗಿದೆ. ರೈತರ ಹಿತದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತದಿಂದ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಗೃಹಜ್ಯೋತಿ ಯೋಜನೆ ಅನುಷ್ಠಾನ ಮತ್ತು ಮಳೆಗಾಲದ ಹಿನ್ನೆಲೆ ವಿದ್ಯುತ್ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರಿಗೆ ಪಾರದರ್ಶಕ ಹಾಗೂ ಜನಪರ ಆಡಳಿತ ಒದಗಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಶಾಸಕರು, ಕ್ಷೇತ್ರದಾದ್ಯಂತ ವಿದ್ಯುತ್ ಸರಬರಾಜಿನಲ್ಲಿನ ಅಡಚಣೆಗಳನ್ನು ನಿವಾರಿಸುವ ಕುರಿತು ಅಗತ್ಯವಿರುವ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಅಶೋಕ ಕಿವಡಿ, ಹೆಸ್ಕಾಂ ಅಧಿಕಾರಿಗಳಾದ ಎಂ.ಎಸ್. ಧೂತಿ, ರವೀಂದ್ರ ಮೆಟಗುಡ್ಡ, ವಿ.ಎನ್. ಮರಕಟ್ಟಿ, ಎಸ್.ಜೆ. ಕಲಕಂಬ, ಪಂಡಿತ ಹುನ್ನೂರ ಇತರರಿದ್ದರು.