ರಬಕವಿ ನಗರದ ಬಸ್ ನಿಲ್ದಾಣ ಪಕ್ಕದ ಜಿಎಲ್‌ಬಿಸಿ ಐಬಿ ಉದ್ಯಾನವನದಲ್ಲಿ ಮೊಬೈಲ್ ಗೇಮ್‌ನಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು.
ರಬಕವಿ/ಬನಹಟ್ಟಿ: ರಬಕವಿ ನಗರದ ಬಸ್ ನಿಲ್ದಾಣ ಸಮೀಪದಲ್ಲಿರುವ ಜಿಎಲ್‌ಬಿಸಿ ವ್ಯಾಪ್ತಿಯ ಐಬಿ ಉದ್ಯಾನವನವು ಇತ್ತೀಚಿಗೆ ವಿದ್ಯಾರ್ಥಿಗಳ ಮೊಬೈಲ್ ಗೇಮ್ ಚಟುವಟಿಕೆಗಳ ಕೇಂದ್ರವಾಗಿ ಪರಿಣಮಿಸಿದೆ. ಪಬ್ಜಿ ಸೇರಿದಂತೆ ವಿವಿಧ ಆನ್‌ಲೈನ್ ಆಟಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲೇ ಇಲ್ಲಿ ಕಾಲ ಕಳೆಯುತ್ತಿರುವುದು ಗಮನಕ್ಕೆ ಬಂದಿದೆ.
ತಾಲೂಕಿನ ವಿವಿಧ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕೆಲವರು ಶಾಲೆಗೆ ಗೈರುಹಾಜರಾಗುವುದು ಅಥವಾ ಶಾಲಾವಧಿ ಬಳಿಕ ಬ್ಯಾಗ್‌ಗಳನ್ನು ಉದ್ಯಾನವನದ ಮರಗಳಿಗೆ ಹಾಕಿ ಗುಂಪು ಗುಂಪಾಗಿ ಕುಳಿತು ಮೊಬೈಲ್ ಬಳಕೆ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ರಬಕವಿ-ಬನಹಟ್ಟಿ ಪ್ರದೇಶದ ಕೆಲ ಖಾಲಿ ಜಾಗಗಳಲ್ಲಿಯೂ ಇಂತಹ ಚಟುವಟಿಕೆಗಳು ಕಂಡುಬರುತ್ತಿವೆ ಎನ್ನಲಾಗಿದೆ.
ಇನ್ನೊಂದು ಗಂಭೀರ ಸಂಗತಿ ಎಂದರೆ ಸುತ್ತಮುತ್ತಲಿನ ಇಂಟರ್‌ನೆಟ್ ಹಾಟ್‌ಸ್ಪಾಟ್‌ಗಳ ಪಾಸ್‌ವರ್ಡ್ಗಳನ್ನು ಕದ್ದು ಗೇಮ್ ಆಡುವ ಘಟನೆಗಳೂ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದತ್ತ ಅಲಕ್ಷ್ಯ ಹಾಗೂ ಸಮಯದ ವ್ಯರ್ಥ ಖರ್ಚು ಹೆಚ್ಚುತ್ತಿರುವುದಾಗಿ ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಯುವ ಪೀಳಿಗೆಯ ಭವಿಷ್ಯ ಹಿತದೃಷ್ಟಿಯಿಂದ ಪಾಲಕರು, ಶಿಕ್ಷಕರು ಹಾಗೂ ಸಮಾಜ ಒಟ್ಟಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉದ್ಯಾನವನ ಪ್ರದೇಶದಲ್ಲಿ ಮೇಲ್ವಿಚಾರಣೆ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.