ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಅವರು ಜಿಲ್ಲಾಧಿಕಾರಿ ಸಂಗಪ್ಪ ಜೊತೆಗೆ ಚರ್ಚೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ. ಪ್ರಭಾಕರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಡಾ. ವೀಣಾ ಇತರರಿದ್ದರು.
- ಬಾಗಲಕೋಟೆಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಭೇಟಿ
- ಡಿಸಿ, ಸಿಇಒ, ಎಸ್‌ಪಿ ಕಚೇರಿಗೆ ತೆರಳಿ ಚರ್ಚೆ
ಬಾಗಲಕೋಟೆ: ಮಕ್ಕಳಿಗೆ ಸುರಕ್ಷಿತ ಹಾಗೂ ಹಕ್ಕು ಸಮ್ಮತ ವಾತಾವರಣ ಕಲ್ಪಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ತಿಳಿಸಿದರು.
ಆಯೋಗದ ಸದಸ್ಯರಾಗಿ ಆಯ್ಕೆಯಾದ ಬಳಿಕ ಸೋಮವಾರ ಮೊದಲ ಸಲ ಬಾಗಲಕೋಟೆಗೆ ಆಗಮಿಸಿದ್ದ ಹಲಮಡಗಿ ಅವರು ಜಿಲ್ಲಾಽಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಶಿಕ್ಷಣ, ಬಾಲ್ಯ ವಿವಾಹ, ಪೋಕ್ಸೊ ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದರು.
ಮಕ್ಕಳ ಶಿಕ್ಷಣದ ಹಕ್ಕು, ಆರೋಗ್ಯ, ಪೌಷ್ಠಿಕತೆ, ಬಾಲ್ಯವಿವಾಹ ತಡೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆ ಹಾಗೂ ಸರ್ಕಾರದ ವಿವಿಧ ಮಕ್ಕಳ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಾಲೋಚನೆ ನಡೆಸಿದರು.
ಜಿಲ್ಲಾಽಕಾರಿ ಸಂಗಪ್ಪ ಮಾತನಾಡಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ನಿಲಯದ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸುವ ನಿಟ್ಟಿನಲ್ಲಿ ಪ್ರತ್ಯೇಕ ಎಸ್‌ಒಪಿ ಮಾಡಲಾಗುವುದು. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಅಽಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂಗನವಾಡಿ ದುರಸ್ತಿ ಇದ್ದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಅಗತ್ಯ ದುರಸ್ತಿ ಮಾಡಿಕೊಳ್ಳಲು ತಿಳಿಸಿದರು. ಅಲ್ಲದೆ ಮಕ್ಕಳಿಗೆ ಮೊಟ್ಟೆ ಹಾಗೂ ಊಟದ ಮೆನುವಿನಲ್ಲಿ ಇಲ್ಲಿಯ ವಾತಾವರಣಕ್ಕೆ ತಕ್ಕಂತೆ ಆಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿದ ಜಗನ್ನಾಥ ಹಲಮಡಗಿ, ಮಕ್ಕಳ ಮೇಲಿನ ಅಪರಾಧಗಳ ತಡೆ, ಪೋಕ್ಸೊ ಕಾಯ್ದೆ ಪ್ರಕರಣಗಳ ತನಿಖೆ, ಕಾಣೆಯಾದ ಮಕ್ಕಳ ಪತ್ತೆ, ಬಾಲಸ್ನೇಹಿ ಪೊಲೀಸ್ ವ್ಯವಸ್ಥೆ ಹಾಗೂ ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಿದರು.
ಜಿ.ಪಂ. ಸಿಇಒ ಗಜಾನನ ಬಾಲೆ ಅವರೊಂದಿಗೆ ನಡೆದ ಚರ್ಚೆಯಲ್ಲಿ ಅಂಗನವಾಡಿ, ಶಾಲಾ ಶಿಕ್ಷಣ, ಪೌಷ್ಠಿಕ ಆಹಾರ, ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಮಾಹಿತಿ ಪಡೆದರು.
ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲು ಆಯೋಗದ ಸದಸ್ಯ ಜಗನ್ನಾಥ ಹಲಮಡಗಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ. ಪ್ರಭಾಕರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಡಾ. ವೀಣಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಮೇಶ ಸೂಳಿಕೇರಿ ಸೇರಿ ಇತರರಿದ್ದರು.