ತೇರದಾಳ ಪಟ್ಟಣದ ಪುರಸಭೆ ಆವರಣದಲ್ಲಿ ಖಾಲಿ ಕೊಡ ಹಿಡಿದು ಗುರುವಾರ ಪ್ರತಿಭಟನೆ ನಡೆಸಲಾಯಿತು. ಸುಂದ್ರವ್ವ ಮಾಲಗಾಂವಿ, ಶೇಕವ್ವ ಮೂಡಲಗಿ, ಪ್ರಭು ಮಾಲಗಾಂವಿ, ಶಂಕರ ತೊದಲಬಾಗಿ, ಈಶ್ವರ ಅಥಣಿ, ಮೈಬೂಬ ಗಂಜಿ, ಮಾಂತೇಶ ರಾವಳ ಇತರರಿದ್ದರು.
- ಮಹಿಳೆ, ಮಕ್ಕಳಿಂದ ನೀರಿಗಾಗಿ ಹೋರಾಟ
- ಶಾಸಕರ ಮಾತಿಗೂ ಬೆಲೆಯಿಲ್ಲ
ತೇರದಾಳ: ಖಾಲಿ ಕೊಡಗಳನ್ನು ಹಿಡಿದುಕೊಂಡು ಪುರಸಭೆಗೆ ಮುತ್ತಿಗೆ ಹಾಕಿ ನೀರು ಕೊಡಿ ಎಂದು ಒತ್ತಾಯಿಸಿದ ಘಟನೆ ಗುರುವಾರ ನಡೆದಿದೆ.
ಪಟ್ಟಣದ ಜನನಿಬಿಡ ಪ್ರದೇಶವಾದ ಕಲ್ಲಟ್ಟಿ ಗಲ್ಲಿಯ ಕಾಮನಕಟ್ಟೆ ಹಿಂಭಾಗದ ವಸತಿ ಜನರು ನೀರಿಲ್ಲದೆ ಬೇಸತ್ತು, ಜನಪ್ರತಿನಿಧಿಗಳನ್ನು ಎಷ್ಟೇ ಕೇಳಿದರೂ ಸಮಸ್ಯೆ ಬಗೆಹರಿಯದೆ ಇರುವುದರಿಂದ ಪುರಸಭೆಗೆ ಖಾಲಿ ಕೊಡಗಳನ್ನು ತೆಗೆದುಕೊಂಡು ಮುಖ್ಯಾಧಿಕಾರಿಗೆ ನಮಗೆ ನೀರು ಕೊಡಿ ಎಂದು ಆಗ್ರಹಿಸಿದರು.
ಕೃಷ್ಣಾ ನದಿಯಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿದ್ದು, ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇಲ್ಲಾ ಎಂದು ಸ್ವತಃ ಶಾಸಕ ಸಿದ್ದು ಸವದಿ ಅವರೇ ಮಾಧ್ಯಮಗಳ ಮೂಲಕ ಹೇಳುತ್ತಿದ್ದರೂ ಕೂಡ ಇಲ್ಲಿಯ ಜನತೆ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಾರ್ಡ್ನಲ್ಲಿ ನಾಲ್ಕು ಕೊಳವೆಬಾವಿಗಳಿದ್ದು, ಮೂರೂ ಬಂದ್ ಆಗಿವೆ. ಇನ್ನೊಂದರಲ್ಲಿ ಕೆಲವೇ ಸಮಯ ಮಾತ್ರ ನೀರು ಬರುವುದರಿಂದ ಜನರು ನೀರಿಗಾಗಿ ಪರದಾಡಬೇಕಾಗಿದೆ ಎಂದು ನಿವಾಸಿಗಳು ಆಕ್ರೋಶ
ನೀರಿಗಾಗಿ ಹತ್ತಾರು ದಿನಗಳು ಕಾಯಬೇಕಾಗಿದ್ದು, ಹನಿ ನೀರಿಗೂ ಪರದಾಡುತ್ತಿದ್ದೇವೆ ಎಂದು ನಿವಾಸಿಗಳು ಅಧಿಕಾರಿಗೆ ಅಲವತ್ತುಕೊಂಡರು. ಇದಕ್ಕೂ ಮುನ್ನಾ ಖಾಲಿ ಕೊಡಗಳನ್ನು ಹಿಡಿದುಕೊಂಡು ಮಹಿಳೆಯರು ಮತ್ತು ಮಕ್ಕಳು ಸೇರಿ ವಾರ್ಡ್ ಜನತೆ ವಸತಿ ಬಡಾವಣೆಯಲ್ಲಿ ಏತಕ್ಕಾಗಿ ಹೋರಾಟ, ನೀರಿಗಾಗಿ ಹೋರಾಟ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.
ಸುಂದ್ರವ್ವ ಮಾಲಗಾಂವಿ, ಶೇಕವ್ವ ಮೂಡಲಗಿ, ಪ್ರಭು ಮಾಲಗಾಂವಿ, ಶಂಕರ ತೊದಲಬಾಗಿ, ಈಶ್ವರ ಅಥಣಿ, ಮೈಬೂಬ ಗಂಜಿ, ಮಾಂತೇಶ ರಾವಳ ಇತರರಿದ್ದರು.
"
ಕಲ್ಲಟ್ಟಿ ಗಲ್ಲಿಯ ಕಾಮನಕಟ್ಟಿ ಬಳಿ ಇರುವ ಕೊಳವೆಬಾವಿ ದುರಸ್ತಿಯಲ್ಲಿದೆ. ಶೀಘ್ರಗತಿಯಲ್ಲಿ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸಲಾಗುವುದು. ಹೊಸದಾಗಿ ಕೊಳಬಾವಿ ಕೊರೆಯಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಅದು ಸರಿಯಾದ ಬಳಿಕ ಸಮಸ್ಯೆ ಸಂಪೂರ್ಣ ಪರಿಹಾರವಾಗಲಿದೆ.
— | ಎಫ್.ಬಿ.ಗಿಡ್ಡಿ ಮುಖ್ಯಾಧಿಕಾರಿ ಪುರಸಭೆ ತೇರದಾಳ