ಮಹಾಲಿಂಗಪುರದಲ್ಲಿ ವಿದ್ಯುತ್ ಇಲಾಖೆಯ ಖಾಸಗೀಕರಣ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿದರು. ಪಕ್ಕದಲ್ಲಿ ಸುಭಾಸ ಶಿರಬೂರ, ಧರೆಪ್ಪ ಸಾಂಗಲಿಕರ, ನಿಂಗಪ್ಪ ಬಾಳಿಕಾಯಿ ಇತರರಿದ್ದರು. 
ಬಾಗಲಕೋಟೆ

ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ವಿರುದ್ಧ ಘೋಷಣೆ
  • ಹೆಸ್ಕಾಂ ಕಚೇರಿವರೆಗೆ ಮೆರವಣಿಗೆ
  • ರೈತರ ಪ್ರಶ್ನೆ
ಮಹಾಲಿಂಗಪುರ : ನಗರದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ವಿರೋಧಿಸಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ಕಚೇರಿವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಖಾಸಗೀಕರಣ ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ಈ ನೆಲ ನಮ್ಮದು, ಈ ಜಲ ನಮ್ಮದು. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದು ರೈತರು ಮತ್ತು ಸಾಮಾನ್ಯ ಜನರ ಹಿತಾಸಕ್ತಿಗೆ ವಿರುದ್ಧ. ಖಾಸಗಿ ಕಂಪನಿಗಳಿಂದ ವಿದ್ಯುತ್ ದರ ಏರಿಕೆ ಸಂಭವಿಸಿ ರೈತರ ಬದುಕಿಗೆ ಸಂಕಷ್ಟ ಉಂಟಾಗುತ್ತದೆ ಎಂದು ಹೇಳಿದರು.
ರೈತ ಮುಖಂಡರಾದ ಸುಭಾಸ ಶಿರಬೂರ ಹಾಗೂ ಈರಪ್ಪ ಹಂಚಿನಾಳ ಸಹ ಖಾಸಗೀಕರಣದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆಮ್ ಆದ್ಮಿ ಪಕ್ಷದ ಅರ್ಜುನ ಹಲಗಿಗೌಡರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಖಾಸಗೀಕರಣದಲ್ಲಿ ಪಾತ್ರವಹಿಸುತ್ತಿವೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿದ್ದು ಸವದಿ, ಖಾಸಗೀಕರಣ ಕ್ರಮ ರಾಜ್ಯ ಸರ್ಕಾರದ ನಿರ್ಧಾರವಾಗಿದ್ದು ಕೇಂದ್ರದ ಮೇಲೆ ಆರೋಪ ಮಾಡುವುದನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕೆಲವು ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಣಾಮವಾಗಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲಿಕರ ಮಾತನಾಡಿ, ಹೋರಾಟ ರಾಜಕೀಯದಿಂದ ದೂರವಿದ್ದು ಒಗ್ಗಟ್ಟಿನಿಂದ ಸಾಗಿದರೆ ಮಾತ್ರ ಯಶಸ್ಸು ಸಾಽಸಬಹುದು ಎಂದರು.
ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ರೈತ ಮುಖಂಡ ಬಂದು ಪಕಾಲಿ, ಶ್ರೀಕಾಂತ ಗೂಳನ್ನವರ ಮಾತನಾಡಿದರು.
ಪ್ರತಿಭಟನೆ ನಂತರ ತಾಲೂಕು ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್ ವಿಜಯಕುಮಾರ ಕಡಕೋಳ ಹಾಗೂ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್. ಮರಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಿಂಗಪ್ಪ ಬಾಳಿಕಾಯಿ, ಮಲ್ಲಪ್ಪ ಮಿರ್ಜಿ, ಮಹಾಲಿಂಗಪ್ಪ ಅವರಾದಿ, ಕರಿಯಪ್ಪ ಮೇಟಿ, ವಿನೋದಗೌಡ ಪಾಟೀಲ ಸೇರಿ ಅನೇಕರು ಭಾಗವಹಿಸಿದ್ದರು.