ಬಾಗಲಕೋಟೆ ವಿದ್ಯಾಗಿರಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಗ್ಲಿಷ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಜಿ.ಪಂ. ಸಿಇಒ ಶಶಿಧರ ಕುರೇರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ಜಿಪಂ ಸಿಇಒ ಶಶಿಧರ ಕುರೇರ ಸೂಚನೆ
- ವಿವಿಧ ಎಸ್‌ಎಸ್‌ಎಲ್‌ಸಿ ಕೇಂದ್ರಗಳಿಗೆ ಭೇಟಿ
- ಕನ್ನಡ ವಿಷಯಕ್ಕೆ 293 ವಿದ್ಯಾರ್ಥಿಗಳು ಗೈರು
ಬಾಗಲಕೋಟೆ: ಜಿಲ್ಲೆಯಲ್ಲಿ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಕನ್ನಡ ವಿಷಯ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ವಿದ್ಯಾಗಿರಿಯಲ್ಲಿರುವ ಬಸವೇಶ್ವರ ವಿದ್ಯಾವರ್ಧಕ ಸಂಘದ ಇಂಗ್ಲಿಷ್ ಮಾಧ್ಯಮ ಶಾಲೆ, ಸಮೃದ್ಧಿ ಗುರುಕುಲ ಶಾಲೆ, ಗದ್ದನಕೇರಿಯಲ್ಲಿರುವ ಮಳಿಯಪ್ಪ ಅಜ್ಜನ ಶಾಲೆ ಹಾಗೂ ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾವರ್ಧಕ ಸಂಘದ ಶಾಲೆಗಳಲ್ಲಿ ಸ್ಥಾಪಿಸಲಾದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕೊಠಡಿಗಳಲ್ಲಿ ನಡೆಯುತ್ತಿರುವ ವ್ಯವಸ್ಥೆಗಳನ್ನು ಅವಲೋಕಿಸಿ, ವಿದ್ಯಾರ್ಥಿಗಳು ಶಾಂತ ವಾತಾವರಣದಲ್ಲಿ ಪರೀಕ್ಷೆ ಬರೆಯುತ್ತಿರುವುದನ್ನು ಪರಿಶೀಲಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿನ ಭದ್ರತಾ ವ್ಯವಸ್ಥೆ, ವಿದ್ಯಾರ್ಥಿಗಳ ಆಸನ ವ್ಯವಸ್ಥೆ, ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಪರೀಕ್ಷಾ ಅಕ್ರಮಗಳಿಗೆ ಆಸ್ಪದ ನೀಡದಂತೆ ಸರ್ಕಾರ ಹೊರಡಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಅಽಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮತ್ತು ಕೊಠಡಿ ಮೇಲ್ವಿಚಾರಕರೊಂದಿಗೆ ಚರ್ಚಿಸಿದ ಕುರೇರ ಅವರು, ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ನೀಡದಂತೆ ಮತ್ತು ಪರೀಕ್ಷಾ ಪಾವಿತ್ರ‍್ಯತೆ ಕಾಪಾಡುವಂತೆ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಶಾಂತಿಯುತವಾಗಿ ಪರೀಕ್ಷೆ ಬರೆಯಲು ಪೂರಕವಾದ ವಾತಾವರಣ ಇದೆಯೇ? ಎಂಬುದನ್ನು ಖಚಿತಪಡಿಸಿಕೊಂಡರು. ಕೇಂದ್ರಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳ ಕಾರ್ಯಕ್ಷಮತೆ ಮತ್ತು ಪ್ರಶ್ನೆಪತ್ರಿಕೆಗಳ ಸುರಕ್ಷಿತ ನಿರ್ವಹಣೆಯನ್ನು ಅವರು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಭಯರಹಿತ ಹಾಗೂ ಸುಗಮ ಪರೀಕ್ಷಾ ವಾತಾವರಣ ಕಲ್ಪಿಸುವುದು ಮುಖ್ಯವಾಗಿದ್ದು, ಎಲ್ಲ ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಲು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಸಿ. ಮನ್ನಿಕೇರಿ ಅವರು, ಬುಧವಾರ ನಡೆದ ಕನ್ನಡ ವಿಷಯ ಪರೀಕ್ಷೆಗೆ ಒಟ್ಟು 31625 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಈ ಪೈಕಿ 31332 ವಿದ್ಯಾರ್ಥಿಗಳು ಹಾಜರಾಗಿ 293 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ. ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿರುವುದಿಲ್ಲವೆಂದು ತಿಳಿಸಿದರು.