ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಸಿದ್ಧಾರ್ಥ ಗೋಯಲ್ ಮಾತನಾಡಿದರು. ಜಿಲ್ಲಾಧಿಕಾರಿ ಸಂಗಪ್ಪ, ಎಡಿಸಿ ಶೋಕ ತೇಲಿ ಇದ್ದರು.
- ವಿದ್ಯಾಗಿರಿ
- ನವನಗರದಲ್ಲಿ ವಾಪಸ್
ಬಾಗಲಕೋಟೆ: ನಗರದಲ್ಲಿ ಮೂರು ದಿನಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ವ್ಯಾಪಾರ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನವನಗರ, ವಿದ್ಯಾಗಿರಿಯಲ್ಲಿನ ನಿಷೇಧಾಜ್ಞೆ ವಾಪಸ್ ಪಡೆಯಲಾಗಿದೆ. ಆದರೆ, ಬಾಗಲಕೋಟೆಯಲ್ಲಿ ಮಾತ್ರ ಫೆ.28ರವರೆಗೆ ಮುಂದುವರಿಯಲಿದೆ ಎಂದು ಎಸ್‌ಪಿ ಸಿದ್ಧಾರ್ಥ ಗೋಯಲ್ ಹೇಳಿದರು.
ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಸಂಗಪ್ಪ ಜೊತೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಕೆಲವು ಸಂಘಟನೆಯವರು ಫೆ.26ರಂದು ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿರುತ್ತಾರೆ. ಹಳೆಯ ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಇರುವುದರಿಂದ ಯಾವುದೇ ಪ್ರತಿಭಟನೆಗೆ ಅವಕಾಶ ಇರುವುದಿಲ್ಲ. ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನವನಗರ ವ್ಯಾಪ್ತಿಯಲ್ಲಿ ಅನುಮತಿ ಕೇಳಿದರೆ ಪರಿಶೀಲನೆ ನಡೆಸುತ್ತೇವೆ ಎಂದರು.
ಮುಂಬರುವ ಹೋಳಿ, ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪ್ರತಿಭಟನೆಯನ್ನು ಮಾಡದೇ ಶಾಂತಿ ಕಾಪಾಡಲು ಸಹಕರಿಸಬೇಕು. ಪ್ರತಿಭಟನೆ ಕೈಗೊಂಡು ನಗರದಲ್ಲಿ ಅಶಾಂತಿ ಸೃಷ್ಟಿಯಾದರೆ ಸಂಘಟಕರನ್ನೇ ಹೊಣೆಗಾರರನ್ನಾಗಿಸಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಘಟನೆಗೆ ಸಂಬಂಸಿದಂತೆ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡು, ಕೆಲವರನ್ನೂ ಈಗಾಗಲೇ ಬಂಧಿಸಲಾಗಿದೆ. ಸಾಕ್ಷಿ ಆಧರಿಸಿ ತನಿಖೆ ಮುಂದುವರೆಸಲಾಗಿದೆ. ಯಾವುದೇ ಸಮುದಾಯ ನೋಡದೇ ತಪ್ಪು ಮಾಡಿದವರನ್ನು ಬಂಧಿಸಲಾಗುವುದು. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಈಗಾಗಲೇ ಹಿಂದೂ, ಮುಸ್ಲಿಂ ಮುಖಂಡರ ಜತೆಗೆ ಸಭೆ ಮಾಡಿದ್ದೇವೆ. ಶಾಂತಿ ಕದಡುವ ಕೆಲಸ ಆಗಬಾರದು. ಆರೋಪಿಗಳನ್ನು ಬಂಧಿಸಲಾಗಿದೆ. ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸಲಾಗಿದೆ ಎಂದರು.
ವ್ಯಾಪಾರಸ್ಥರ ಸಂಘದವರು ವಹಿವಾಟಿಗೆ ಧಕ್ಕೆಯಾಗುತ್ತಿದೆ ಎಂದು ಮನವಿ ಸಲ್ಲಿಸಿದ್ದಾರೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು. ಎಲ್ಲರೂ ಸಹಬಾಳ್ವೆಯಿಂದ ಇರಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಇದ್ದರು.