ಲೋಕಾಪುರ ಸಮೀಪ ಭಂಟನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಕಲಾವಿದರು ಚೌಡಕಿ ಪದ ಪ್ರದರ್ಶನ ಮಾಡಿದರು.
- ಪ್ರಗತಿಪರ ರೈತ ವೆಂಕಪ್ಪ ಪಚ್ಚನ್ನವರ ಹೇಳಿಕೆ
- ಜಾನಪದ ಉತ್ಸವ
- ಗ್ರಾಮೀಣ ಸಂಸ್ಕೃತಿಯ ವೈಭವ ಅನಾವರಣ
ಲೋಕಾಪುರ: ಶರಣರು, ಸಂತರು ಹಾಗೂ ಸೂಫಿಗಳ ಪರಂಪರೆಯ ನೆಲೆಯಾದ ನಮ್ಮ ನಾಡಿನ ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಗತಿಪರ ರೈತ ವೆಂಕಪ್ಪ ಪಚ್ಚನ್ನವರ ಹೇಳಿದರು.
ಸಮೀಪದ ಭಂಟನೂರ ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ಮಾರುತೇಶ್ವರ ಗ್ರಾಮೀಣ ಹಾಗೂ ಸಂಸ್ಕೃತಿಕ ಕಲಾ ಅಭಿವದ್ಧಿ ಸಂಘ (ರಿ) ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಜಾನಪದ ಉತ್ಸವದಲ್ಲಿ ಅವರು ಮಾತನಾಡಿದರು.
ಜಾನಪದವು ನಮ್ಮ ಸಂಸ್ಕೃತಿ, ತತ್ವ ಹಾಗೂ ಜೀವನ ಮೌಲ್ಯಗಳ ಪ್ರತೀಕವಾಗಿದ್ದು, ಕತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಯುಗದಲ್ಲಿಯೂ ನಮ್ಮತನವನ್ನು ಉಳಿಸಿಕೊಳ್ಳುವುದು ಅಗತ್ಯ ಎಂದರು.
ಶಿಕ್ಷಕ ಕೆ.ಪಿ. ಯಾದವಾಡ ಮಾತನಾಡಿ, ಅಳಿವಿನಂಚಿನಲ್ಲಿರುವ ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಜಾನಪದ ಸಾಹಿತ್ಯ ಹಾಗೂ ಕಲೆಗಳು ಸಮಾಜದ ಬದುಕು ಮತ್ತು ಪರಿಸರದ ಸೊಗಡನ್ನು ಪ್ರತಿಬಿಂಬಿಸುವ ಅಮೂಲ್ಯ ಪರಂಪರೆಯಾಗಿವೆ ಎಂದರು.
ಚೌಡಕಿ ಪದ ಸೇರಿ ವಿವಿಧ ಜಾನಪದ ಕಲಾ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಿದವು.
ಉದ್ಘಾಟಕರಾಗಿ ಗಿರಿಯಪ್ಪ ಹುಡೇದ ಭಾಗವಹಿಸಿದ್ದರು. ಲಕ್ಷ್ಮಣ ಸೊನ್ನದ, ಲಕ್ಷ್ಮಣ ಬಸುನಾಯ್ಕ, ಯಲ್ಲಪ್ಪ ಬಸುನಾಯ್ಕ, ಸದಪ್ಪ ರಂಗಣ್ಣವರ, ವಿಠ್ಠಲ ರಂಗಣ್ಣವರ, ರಂಗಪ್ಪ ಬಸುನಾಯ್ಕ, ಪಾಂಡು ಬಿದರಿ, ಯಲ್ಲಪ್ಪ ಕವಳಿ, ಕಷ್ಣಾ ಭಜಂತ್ರಿ, ಸಂಘದ ಅಧ್ಯಕ್ಷ ಶಿವಪುತ್ರಪ್ಪ ರಂಗಣ್ಣವರ, ಸುಭಾಸ ಈರಗಾರ, ಹನಮಂತ ನಾಯ್ಕಪ್ಪನವರ ಹನಮಂತ ಬಿದರಿ ಹಾಗೂ ಜಾನಪದ ಕಲಾವಿದರು ಇದ್ದರು.