ಬಾಗಲಕೋಟೆ: ವಿಶೇಷ ಗ್ರಾಮ ಪಂಚಾಯಿತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ವೇಗ ನೀಡಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಹೇಳಿದರು.
ಜಿ.ಪಂ. ನೂತನ ಸಭಾ ಭವನದಲ್ಲಿ ಬುಧವಾರ ವಿಶೇಷ ಗ್ರಾಮ ಪಂಚಾಯಿತಿ ಯೋಜನೆ ಕುರಿತು ಜರುಗಿದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳು ಗ್ರಾಮಗಳ ಸ್ಥಳೀಯ ಅಗತ್ಯಗಳನ್ನು ಗುರುತಿಸಿ, ಜನರ ಸಹಭಾಗಿತ್ವದೊಂದಿಗೆ ಯೋಜಿತ ಹಾಗೂ ಆದ್ಯತೆ ಆಧಾರದ ಮೇಲೆ ಅಭಿವೃದ್ಧಿ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು. ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಯೋಜನೆಗಳು ಹಾಗೂ ಲಭ್ಯವಿರುವ ಸಂಪನ್ಮೂಲಗಳನ್ನು ಸಮನ್ವಯಗೊಳಿಸಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ಮುಂದಿನ ಸಾಲಿನಲ್ಲಿ ಕೈಗೊಳ್ಳಬೇಕಾದ ವಿಬಿ-ಜಿ ರಾಮ್-ಜಿ ಕಾಮಗಾರಿಗಳ ಅಗತ್ಯ ಹಾಗೂ ಆದ್ಯತೆಗಳನ್ನು ಗುರುತಿಸಲು ಅಕ್ಟೋಬರ್ ೨ರಂದು ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಗ್ರಾಮಸಭೆ ನಡೆಸಬೇಕು. ಗ್ರಾಮಸಭೆಯಲ್ಲಿ ಗ್ರಾಮಸ್ಥರ ಭಾಗವಹಿಸುವಿಕೆಯೊಂದಿಗೆ ಗ್ರಾಮದ ಅಗತ್ಯಗಳನ್ನು ಗುರುತಿಸಿ, ಅರ್ಹ ಫಲಾನುಭವಿಗಳು ಹಾಗೂ ಅಗತ್ಯವಿರುವ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಗುರುತಿಸಿ, ಆದ್ಯತೆ ಪಟ್ಟಿಯನ್ನು ಸಿದ್ಧಪಡಿಸಬೇಕು. ಮುಂದಿನ ಸಾಲಿನ ಯೋಜನೆಯನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಿ, ಗ್ರಾಮ ಸಭೆಯ ಅನುಮೋದನೆಯೊಂದಿಗೆ ಮುಂದಿನ ಹಂತದ ಅನುಷ್ಠಾನಕ್ಕೆ ಕ್ರಮವಹಿಸಲು ತಿಳಿಸಿದರು.
ವಿಶೇಷ ಗ್ರಾ.ಪಂ. ಯೋಜನೆ ಹಾಗೂ ವಿಬಿ-ಜಿ ರಾಮ್-ಜಿ ಯೋಜನೆಗಳ ಅನುಷ್ಠಾನದಲ್ಲಿ ಜನರ ಸಹಭಾಗಿತ್ವ, ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಗ್ರಾಮಸಭೆಯಲ್ಲಿ ಜನರಿಂದ ಬಂದ ಬೇಡಿಕೆಗಳನ್ನು ದಾಖಲಿಸಿ, ಅವುಗಳ ಆಧಾರದ ಮೇಲೆ ವೈಜ್ಞಾನಿಕ ಹಾಗೂ ಅಗತ್ಯಾಧಾರಿತ ಕ್ರಿಯಾ ಯೋಜನೆ ರೂಪಿಸಬೇಕು. ಆಯ್ಕೆಯಾದ ಕಾಮಗಾರಿಗಳನ್ನು ನಿಗದಿತ ಅವಽಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಽಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ ಮಾತನಾಡಿ, ವಿಶೇಷ ಗ್ರಾಮ ಯೋಜನೆ ಉದ್ದೇಶ, ಯೋಜನೆ ರೂಪಿಸುವ ವಿಧಾನ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳು, ಸ್ಥಳೀಯ ಅಗತ್ಯಗಳ ಗುರುತಿಸುವಿಕೆ, ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ವಿವಿಧ ಇಲಾಖೆಗಳ ಸಮನ್ವಯದ ಕುರಿತು ಸಮಗ್ರ ಮಾಹಿತಿ
ನೀಡಿದರು.
ತರಬೇತಿಯಲ್ಲಿ ಯೋಜನೆ ರೂಪಿಸುವಿಕೆ, ಆದ್ಯತೆಯ ಕಾಮಗಾರಿಗಳ ಆಯ್ಕೆ, ಇಲಾಖಾ ಯೋಜನೆಗಳ ಸಮನ್ವಯ, ಗ್ರಾಮ ಸಭೆಯ ಮೂಲಕ ಜನರ ಸಹಭಾಗಿತ್ವ, ಗುಣಮಟ್ಟದ ಕಾಮಗಾರಿ, ಸಮಯಬದ್ಧ ಅನುಷ್ಠಾನ, ಮೇಲ್ವಿಚಾರಣೆ ಹಾಗೂ ಪ್ರಗತಿ ಪರಿಶೀಲನೆ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.