ಗುಳೇದಗುಡ್ಡ ಸಮೀಪದ ತೂಗುಣಸಿ ಕ್ರಾಸ್ ಹತ್ತಿರದ ಬಸವೇಶ್ವರ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನರ್ಸರಿ ವಿಭಾಗದ ಮಕ್ಕಳಿಗಾಗಿ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಪ್ರಾಚಾರ್ಯ ರಾಜಶೇಖರ ಬಿಂಗೊಳ್ಳಿ ಇತರರಿದ್ದರು.
- ಅಮರೇಶ್ವರ ಮಠದ ನೀಲಕಂಠ ಶ್ರೀ ಹೇಳಿಕೆ
- ಶಿಕ್ಷಣದೊಂದಿಗೆ ಮೌಲ್ಯ ಭಿತ್ತಿ
ಗುಳೇದಗುಡ್ಡ : ಭಾರತೀಯ ಪುರಾತನ ಸಂಸ್ಕೃತಿ, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕ್ಷರಾಭ್ಯಾಸ ಮುಖ್ಯವಾಗಿದೆ. ಅಕ್ಷರ ಅಭ್ಯಾಸದಿಂದ ಜ್ಞಾನಾರ್ಜನೆ ಸಾಧ್ಯ ಎಂದು ಕೋಟೆಕಲ್‌ದ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿದರು.
ತಾಲೂಕಿನ ತೂಗುಣಸಿ ಕ್ರಾಸ್ ಹತ್ತಿರ ಇರುವ ಬಸವೇಶ್ವರ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನರ್ಸರಿ ವಿಭಾಗದ ಮಕ್ಕಳಿಗಾಗಿ ಬುಧವಾರ ಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನ ದೀಕ್ಷೆ ನೀಡಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಮಹತ್ವದ ಸಂಸ್ಕಾರಗಳಲ್ಲಿ ಒಂದಾದ ಅಕ್ಷರಾಭ್ಯಾಸ ಮಗುವಿನ ಜೀವನದಲ್ಲಿ ಜ್ಞಾನಾರ್ಜನೆ ಪಯಣಕ್ಕೆ ಶುಭಾರಂಭದ ಸಂಕೇತವಾಗಿದೆ. ಮಗು ತನ್ನ ಜೀವನದ ಮೊಟ್ಟಮೊದಲ ಅಕ್ಷರ ಬರೆಯುವ ಪವಿತ್ರ ಕ್ಷಣ ಮಹತ್ವದ್ದಾಗಿದೆ. ಶಿಕ್ಷಣದ ಜೊತೆಗೆ ಭಾರತೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಪ್ರಾಚಾರ್ಯ ರಾಜಶೇಖರ ಬಿಂಗೊಳ್ಳಿ ಮಾತನಾಡಿ, ಮಕ್ಕಳಿಗೆ ನಮ್ಮ ಪರಂಪರೆಯ ವಿಶೇಷ ಒಲವು, ಕಾಳಜಿ ಹಾಗೂ ಬದ್ಧತೆಯನ್ನು ಪ್ರದರ್ಶಿಸಬೇಕಾಗಿದೆ. ಮಕ್ಕಳಲ್ಲಿ ಅಕ್ಷರಾಭ್ಯಾಸವು ಬೌದ್ಧಿಕ ಬದಲಾವಣೆಯಾಗಲು ಸಾಧ್ಯವಾಗುತ್ತದೆ ಎಂದರು.
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ನರ್ಸರಿ ವಿಭಾಗದ ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.