ಕಲಾದಗಿ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡ ಕಳ್ಳತನದ ವಸ್ತುಗಳೊಂದಿಗೆ ಬಾಗಲಕೋಟೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಅಡಿಷನಲ್ ಎಸ್‌ಪಿ ಜಗದೀಶ ಎಂ, ಸಿಪಿಐ ಆರ್.ಎಸ್. ಬಿರಾದಾರ ಇತರರಿದ್ದರು.
- ಎಸ್‌ಪಿ ಸಿದ್ಧಾರ್ಥ ಗೋಯಲ್ ಮಾಹಿತಿ
- ಐವರ ಬಂಧನ, 7.80 ಲಕ್ಷ ರೂ. ಮೌಲ್ಯದ ಮಾಲು ವಶ
ಕಲಾದಗಿ: ಕಲಾದಗಿ ಹಾಗೂ ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮೂರು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿ 7.80 ಲಕ್ಷ ರೂ. ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.
ಕಲಾದಗಿ ಪೊಲೀಸ್ ಠಾಣೆಯಲ್ಲಿ ಬುಧವಾರ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ಸೀಮಿಕೇರಿ ಬೈಪಾಸ್ ಸಮೀಪದ ಮೌನೇಶ್ವರ ಜ್ಯುವೆಲ್ಲರಿ, ಕಲಾದಗಿ ಹೊರವಲಯದ ಹಾರ್ಡ್ವೇರ್ ಅಂಗಡಿ ಹಾಗೂ ಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಗಳನ್ನು ಚಾಂದಬಾಷಾ ಚಿತ್ತಾಪುರ (ಬಾಗಲಕೋಟೆ), ರಾಜಾ ವಡ್ಡರ (ಚಿಂಚಲಿ), ಮಹಮ್ಮದ್ ಕೈಪ್ (ಕಲಾದಗಿ), ರಿಯಾಜ್ ಅಹ್ಮದ್ ಮಕಾನದಾರ ಹಾಗೂ ಹನುಮಂತ ಹರಿಜನ (ಬದನೂರು) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸುಮಾರು 2,500 ಗ್ರಾಂ ಬೆಳ್ಳಿ ಆಭರಣಗಳು, ಕಳ್ಳತನಕ್ಕೆ ಬಳಸಿದ್ದ ಎರಡು ಬೈಕ್‌ಗಳು, ಹಾರ್ಡ್ವೇರ್ ಸಾಮಗ್ರಿಗಳು ಹಾಗೂ ಒಂದು ಮೊಬೈಲ್ ಸೇರಿ ಒಟ್ಟು 7.80 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.
ಅಡಿಷನಲ್ ಎಸ್‌ಪಿ ಜಗದೀಶ ಎಂ., ಡಿವೈಎಸ್‌ಪಿ ಗಜಾನನ ಸುತಾರ ಅವರ ಮಾರ್ಗದರ್ಶನದಲ್ಲಿ ಸಿಪಿಐ ಆರ್.ಎಸ್. ಬಿರಾದಾರ, ಪಿಎಸ್‌ಐ ಪ್ರವೀಣ ಬೀಳಗಿ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ತಾಂತ್ರಿಕ ವಿಭಾಗದ ತಂಡ ವಿಶೇಷ ಕಾರ್ಯಾಚರಣೆ ನಡೆಸಿದ್ದು, ತಂಡದ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದರು. ಉತ್ತಮ ಕಾರ್ಯನಿರ್ವಹಿಸಿದ ಸಿಬ್ಬಂದಿಗೆ ಇಲಾಖೆಯಿಂದ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಅಡಿಷನಲ್ ಎಸ್‌ಪಿ ಜಗದೀಶ ಎಂ., ಸಿಪಿಐ ಆರ್.ಎಸ್. ಬಿರಾದಾರ, ಪಿಎಸ್‌ಐ ಪ್ರವೀಣ ಬೀಳಗಿ ಸೇರಿ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.