ಮೃತ ಮಾಜಿ ಸೈನಿಕ ಹಾಗೂ ಪೊಲೀಸ್ ಕಾನ್ಸ್‌ಟೆಬಲ್ ಹಣಮಂತ ಸಿದ್ದಪ್ಪ ಮೈಲಾರಿ ಅವರ ಪಾರ್ಥಿವ ಶರೀರದ ಮೆರವಣಿಗೆಯು ಕೆರೂರ ಪಟ್ಟಣದಿಂದ ಚಿಂಚಲಕಟ್ಟಿ ಗ್ರಾಮದವರೆಗೆ ನಡೆಯಿತು.
- ಕರ್ತವ್ಯದಲ್ಲಿದ್ದಾಗ ಬೆಂಗಳೂರಿನಲ್ಲಿ ನಿಧನರಾಗಿದ್ದರು
- ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ
- ಗ್ರಾಮಸ್ಥರು ಕಣ್ಣೀರು ಹಾಕಿದರು
ಕೆರೂರ : ಸಮೀಪದ ಚಿಂಚಲಕಟ್ಟಿ ಗ್ರಾಮದ ಮಾಜಿ ಸೈನಿಕ, ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೆಬಲ್ ಹಣಮಂತ ಸಿದ್ದಪ್ಪ ಮೈಲಾರಿ (38) ಅವರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದರು. ಬುಧವಾರ ಪಟ್ಟಣಕ್ಕೆ ಆಗಮಿಸಿದ ಪಾರ್ಥಿವ ಶರೀರದ ಮೆರವಣಿಗೆ ಎಪಿಎಂಸಿ ಮಾರುಕಟ್ಟೆಯಿಂದ ಚಿಂಚಲಕಟ್ಟಿ ಗ್ರಾಮದವರೆಗೆ ನಡೆಸಲಾಯಿತು.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಕಣ್ಣೀರು ಹಾಕಿದರು. ಮಾಜಿ ಸೈನಿಕರ ಸಂಘದವರು ಅಗಲಿದ ಮಾಜಿ ಸೈನಿಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಹಣಮಂತ ಅವರಿಗೆ ಪತ್ನಿ ಮೈನಾವತಿ, ಪುತ್ರ ಅಕ್ಷಯ, ಪುತ್ರಿ ಅಮೃತ ಇದ್ದಾರೆ.