ಮಹಾಲಿಂಗಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗುರುನಾಥರೂಢ ಸ್ವ-ಸಹಾಯ ಸಂಘದ ಸದಸ್ಯರಿಗೆ ಸಾಲ ಮಂಜೂರಾತಿ ಪತ್ರವನ್ನು ಮುಧೋಳ ತಾಲೂಕು ಯೋಜನಾಧಿಕಾರಿ ರಾಜು ಎಸ್. ವಿತರಿಸಿದರು. ಮೇಲ್ವಿಚಾರಕ ಮಲ್ಲಿಕಾರ್ಜುನ,ಅನ್ನಪೂರ್ಣ ಧಡೂತಿ, ಚೈತ್ರಾ ಲಾತೂರ ಇತರರಿದ್ದರು. 
ಬಾಗಲಕೋಟೆ

ಸಕಾಲಕ್ಕೆ ಸಾಲ ಮರು ಪಾವತಿಸಿ ಸಹಕರಿಸಿ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಯೋಜನಾಧಿಕಾರಿ ರಾಜು ಎನ್. ಹೇಳಿಕೆ
  • ಧರ್ಮಸ್ಥಳ ಯೋಜನೆ ಸದ್ಬಳಕೆ ಮಾಡಿಕೊಳ್ಳಿ
ಮಹಾಲಿಂಗಪುರ : ರಾಜ್ಯದ ಮಹಿಳಾ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದ ಕೊಡುಗೆ ಅಪಾರ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಧೋಳ ತಾಲೂಕು ಯೋಜನಾಧಿಕಾರಿ ರಾಜು ಎನ್. ಹೇಳಿದರು.
ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ಗುರುನಾಥರೂಢ ಸ್ವ-ಸಹಾಯ ಸಂಘದ ಸದಸ್ಯರಿಗೆ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೪.೫೦ ಲಕ್ಷ ರೂ. ಸಾಲ ಮಂಜೂರಾತಿ ಪತ್ರ ನೀಡಿ ಮಾತನಾಡಿದ ಅವರು, ಯೋಜನೆಯಿಂದ ಪಡೆಯುವ ಸಾಲವನ್ನು ಮನೆ ದುರಸ್ಥಿ ಮತ್ತು ನಿರ್ಮಾಣ, ಮಕ್ಕಳ ಶಿಕ್ಷಣ, ಮದುವೆ, ಮನೆಗೆ ಅಗತ್ಯ ವಸ್ತುಗಳ ಖರೀದಿ, ವ್ಯಾಪಾರ ಸೇರಿ ಉತ್ತಮ ಕೆಲಸಗಳಿಗಾಗಿ ಸದ್ಬಳಕೆ ಮಾಡಿಕೊಂಡು ಕುಟುಂಬದ ಆರ್ಥಿಕ ಸಬಲತೆ ಸಾಧಿಸಲು ಪ್ರಯತ್ನಿಸಿರಿ ಎಂದು ಹೇಳಿದರು.
ಡಾ. ವೀರೇಂದ್ರ ಹೆಗಡೆಯವರು ಬಡವರಿಗೆ ಬ್ಯಾಂಕುಗಳಿಂದ ನೇರವಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕೊಡಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಂಸ್ಥೆ ಮೂಲಕ ಎಲ್ಲ ಸಾಲಗಳ ಮರುಪಾವತಿ ಜವಾಬ್ದಾರಿಯನ್ನು ನೀಡಿದ್ದಾರೆ. ಬ್ಯಾಂಕುಗಳು ಯೋಜನೆಯ ಸ್ವ-ಸಹಾಯ ಸಂಘಗಳ ವ್ಯವಸ್ಥೆ ಮೂಲಕ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಯಾವುದೇ ಆಸ್ತಿಪಾಸ್ತಿ ಅಡಮಾನ ಪಡೆಯದೇ, ದಾಖಲೆ ಪತ್ರ ಇತ್ಯಾದಿಗಳಿಲ್ಲದೇ ಅತಿ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕಿನ ಸಾಲ ಸೌಲಭ್ಯ ಸಿಗುತ್ತಿದೆ. ಕಂತಿನ ಪ್ರಕಾರ ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡಬೇಕು ಎಂದರು.
ರನ್ನಬೆಳಗಲಿ ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ, ಸೇವಾ ಪ್ರತಿನಿಧಿ ಅನ್ನಪೂರ್ಣ ಧಡೂತಿ, ಚೈತ್ರಾ ಲಾತೂರ, ಗುರುನಾಥರೂಢ ಸ್ವ-ಸಹಾಯ ಸಂಘದ ಅಧ್ಯಕ್ಷೆ ಜಯಶ್ರೀ ಮೋರೆ, ಉಪಾಧ್ಯಕ್ಷೆ ಸುಜಾತಾ ಹೂಗಾರ, ಅನ್ನಪೂರ್ಣ ಚಿಮ್ಮಡ, ಬೋರವ್ವ ಹೂಗಾರ, ಲಲಿತಾ ಬುರುಡ, ಮಾನವ್ವ ಕಲ್ಯಾಣಿ, ಸಿದ್ದವ್ವ ಕಿಡದಾಳ ಇತರರಿದ್ದರು.