ಬನಹಟ್ಟಿ ಕೆಎಚ್‌ಡಿಸಿಯಲ್ಲಿ ನೆಲದ ಮೇಲೆ ಕುಳಿತು ನೇಕಾರರ ಸಭೆ ನಡೆಸಿದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ವರ. ಆಡಳಿತಾಧಿಕಾರಿ ವಿಜಯಕುಮಾರ, ರಾಜು ಹೂಗಾರ, ಹೇಮಾ ಗೊಂದಕರ ಇದ್ದರು. 
ಬಾಗಲಕೋಟೆ

ನಿಗಮದ ಗಂಭೀರ ಸ್ಥಿತಿಯಲ್ಲಿ ಸಹಕಾರ ನೀಡಿ

ಪ್ರಮುಖ ಮುಖ್ಯಾಂಶಗಳು

  • ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವರ ಮನವಿ
  • ಕೈಮಗ್ಗ ಬದಲಿ ಪಾವರ್‌ಲೂಮ್‌ಗೆ ನೇಕಾರರ ಬೇಡಿಕೆ
  • ಕೆಎಚ್‌ಡಿಸಿ ನಿಗಮದ ಪರಿಸ್ಥಿತಿ ಗಂಭೀರವಾಗಿದೆ
ರಬಕವಿ-ಬನಹಟ್ಟಿ: ಕೆಎಚ್‌ಡಿಸಿ ನಿಗಮದ ಪರಿಸ್ಥಿತಿ ಗಂಭೀರವಾಗಿದೆ. ನೇಕಾರರ ಸಹಕಾರ ಅತ್ಯಗತ್ಯವಾಗಿದ್ದು, ನಿರಂತರ ಉದ್ಯೋಗ ಒದಗಿಸುವಲ್ಲಿ ನಿಗಮ ಬದ್ಧವಾಗಿದೆ ಎಂದು ಕೆಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವರ ಹೇಳಿದರು.
ಬನಹಟ್ಟಿಯ ಕೆಎಚ್‌ಡಿಸಿ ಪ್ರಧಾನ ಕಚೇರಿಗೆ ಸೋಮವಾರ ಭೇಟಿ ನೀಡಿ ಸದ್ಯದ ಪರಿಸ್ಥಿತಿ ಅವಲೋಕನಮಾಡಿ ನೇಕಾರರ ಕುಂದು-ಕೊರತೆ ಆಲಿಸಿದರು.
ನೇಕಾರರ ಮಜೂರಿ ಶರ್ಟಿಂಗ್ ಶೇ. 10ರಷ್ಟು ಹಾಗೂ ಶೂಟಿಂಗ್ ಶೇ. 15ರಷ್ಟು ಹೆಚ್ಚಿಸಲಾಗಿದೆಯಾದರೂ ಪ್ರಸಕ್ತ ವಿದ್ಯಮಾನದ ಬದುಕಿನಲ್ಲಿ ಈ ವೇತನ ಅಷ್ಟಕಷ್ಟೆ. ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಮತ್ತಷ್ಟು ವೇತನ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಯೋವೃದ್ಧ ನೇಕಾರರಿಗೆ ಮಾಸಾಶನ ನೀಡಬೇಕೆಂಬ ಮನವಿಗೆ ಸ್ಪಂದಿಸಿದ ಅವರು, ಸರ್ಕಾರಕ್ಕೆ ಮಾಹಿತಿ ಒದಗಿಸಲಾಗುವುದು, ಅದಕ್ಕೆ ಸಂಬಂಧಿಸಿದಂತೆ ಪತ್ರವನ್ನೂ ಸರ್ಕಾರಕ್ಕೆ ಬರೆದು ಮನವಿ ಮಾಡಲಾಗುವುದು ಎಂದರು.
ಮಹಿಳಾ ನೇಕಾರರು ಕೈಮಗ್ಗ ನೇಯ್ಗೆಯಿಂದ ಮಜೂರಿ ಸಮಸ್ಯೆ ಒಂದೆಡೆಯಾದರೆ, ನೇಯ್ಗೆ ಮಾಡುವುದಕ್ಕೆ ಶರೀರದಲ್ಲಿ ಈಗ ತಾಕತ್ತಿಲ್ಲ. ಆದ್ದರಿಂದ ಕೈಮಗ್ಗ ನೇಕಾರರಿಗೆ ಪಾವರ್‌ಲೂಮ್ ಒದಗಿಸಬೇಕು. ವಿದ್ಯುತ್ ಬಿಲ್ ಕೂಡಾ ರಿಯಾಯತಿ ಇದ್ದು, ಅದರಿಂದ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವರ ಸ್ಪಂದಿಸಿ, ಬರುವ ಏಪ್ರಿಲ್ ತಿಂಗಳಲ್ಲಿ ನೇಕಾರರನ್ನೊಳಗೊಂಡ ಮಹತ್ವದ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಆಡಳಿತಾಧಿಕಾರಿ ವಿಜಯಕುಮಾರ, ನೇಕಾರರಾದ ಸಿದ್ದಪ್ಪ ಗಂವಾರ, ರಾಜು ಹೂಗಾರ, ಮಲೀಕ ಜಮಾದಾರ, ಶ್ರೀಶೈಲ ಮುಗಳೊಳ್ಳಿ, ಸುಮಂಗಲಾ ಜಾಲಿಕಟ್ಟಿ, ಹೇಮಾ ಗೊಂದಕರ, ನಾಮದೇವ ಗೊಂದಕರ, ಹಜರತ್ ಮುಲ್ಲಾ ಇತರರಿದ್ದರು.

ನೆಲದ ಮೇಲೆ ಕುಳಿತ ಅಧಿಕಾರಿ

ನಿಗಮದ ಸ್ಥಿತಿ-ಗತಿ ಆಲಿಸಲು ಬಂದಿದ್ದ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪವಾರ ನೇಕಾರರೊಂದಿಗೆ ಸಭೆ ನಡೆಸುವ ಸಂದರ್ಭ ಅಲ್ಲಿದ್ದ ಕುರ್ಚಿಗಳನ್ನು ತೆಗೆದು ನೆಲದ ಮೇಲೆ ಕುಳಿತುಕೊಂಡು ಎಲ್ಲರ ಸಮಸ್ಯೆ ಆಲಿಸಿದ್ದು, ನೇಕಾರರ ಮೆಚ್ಚುಗೆಗೆ ಪಾತ್ರವಾಯಿತು.