2022ರಲ್ಲಿ ಮುದ್ರಣ ಮತ್ತು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಕನ್ನಡ ಪುಸ್ತಕಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಲೇಖಕರು.
- ಗ್ರಂಥಾಲಯ ಇಲಾಖೆ ಕ್ರಮಕ್ಕೆ ಕಂಗಾಲಾದ ಸಾಹಿತಿಗಳು
- ಪುಸ್ತಕ ಪ್ರೇಮಿಗಳ ಗೋಳು ಕೇಳೋರ‌್ಯಾರು?
- ರಾಜ್ಯ ಗ್ರಂಥಾಲಯ ಇಲಾಖೆಯು ಪ್ರತಿವರ್ಷ ಸಾಹಿತ್ಯಾಸಕ್ತರ ಓದಿನ ದಾಹ ತಣಿಸಲು ಸಾವಿರಾರು ಪುಸ್ತಕಗಳನ್ನು ಖರೀದಿ ಮಾಡುತ್ತಿತ್ತು
ಮುಧೋಳ: ನಾಡಿನ ಸಾಹಿತ್ಯಿಕ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವಲ್ಲಿ ಲೇಖಕರು, ಕವಿಗಳು ಹಾಗೂ ಪ್ರಕಾಶಕರ ಪಾತ್ರ ಹಿರಿದು. ಆದರೆ, ಸದ್ಯ ರಾಜ್ಯದಲ್ಲಿನ ಗ್ರಂಥಾಲಯ ಇಲಾಖೆಯ ನಿರ್ಲಕ್ಷ್ಯದಿಂದ ಅಕ್ಷರ ಲೋಕದ ಕಾಯಕವೇ ಸಂಕಷ್ಟಕ್ಕೆ ಸಿಲುಕಿದೆ. ಹಲವು ವಷರ್ಗಳಿಂದ ಪುಸ್ತಕಗಳ ಸಗಟು ಖರೀದಿಗೆ ಗ್ರಂಥಾಲಯ ಇಲಾಖೆ ಮೀನಮೇಷ ಎಣಿಸುತ್ತಿದ್ದು, ಸಾಹಿತಿಗಳು ಹಾಗೂ ಪ್ರಕಾಶಕರು ಆರ್ಥಿಕ ಸಂಕಷ್ಟದಲ್ಲಿ ದಿನದೂಡುವಂತಾಗಿದೆ.
ಅತಂತ್ರ ಸ್ಥಿತಿಯಲ್ಲಿ ಸಾಹಿತಿಗಳು
ಹಿಂದಿನಿಂದಲೂ ರಾಜ್ಯ ಗ್ರಂಥಾಲಯ ಇಲಾಖೆಯು ಪ್ರತಿವರ್ಷ ಸಾಹಿತ್ಯಾಸಕ್ತರ ಓದಿನ ದಾಹ ತಣಿಸಲು ಸಾವಿರಾರು ಪುಸ್ತಕಗಳನ್ನು ಖರೀದಿ ಮಾಡುತ್ತಿತ್ತು. ಕಥೆ, ಕವನ, ಕಾದಂಬರಿ ಮತ್ತು ವಿಮರ್ಶಾತ್ಮಕ ಕೃತಿಗಳನ್ನು ಖರೀದಿಸಿ ಲೇಖಕರಿಗೆ ಪ್ರೋತ್ಸಾಹ ನೀಡುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಬೆನ್ನೆಲುಬಾಗಿ ನಿಂತಿತ್ತು. ಆದರೆ, 2020 ರಿಂದ 2022ರ ಅವಧಿಯಲ್ಲಿ ನಡೆದ ಪ್ರಕ್ರಿಯೆಗಳು ಸಾಹಿತಿಗಳ ಪಾಲಿಗೆ ನೋವನ್ನುಂಟು ಮಾಡಿದೆ.
2020-21ನೇ ಸಾಲಿನಲ್ಲಿ ಪುಸ್ತಕಗಳನ್ನು ನೋಂದಣಿ ಮಾಡಿಸಿಕೊಂಡು, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಪುಸ್ತಕಗಳನ್ನು ಇಲಾಖೆ ತರಿಸಿಕೊಂಡಿದೆ. ಆದರೆ, ಇದುವರೆಗೆ ಲೇಖಕರಿಗೆ ಮತ್ತು ಪ್ರಕಾಶಕರಿಗೆ ನೀಡಬೇಕಾದ ಸಂಭಾವನೆಯ ಚೆಕ್ ಬಿಡುಗಡೆ ಮಾಡದಿರುವುದು ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಣಕ್ಕಾಗಿ ಕಾಯುತ್ತಿರುವ ಹಲವು ಹಿರಿಯ ಸಾಹಿತಿಗಳು ಕಂಗಾಲಾಗಿದ್ದಾರೆ. ಇನ್ನು 2022ರಲ್ಲಿ ಪ್ರಕಟವಾದ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದರೂ, ಪುಸ್ತಕಗಳನ್ನು ತರಿಸಿಕೊಳ್ಳುವಲ್ಲಿ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ.
ಬಾಗಲಕೋಟೆ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ?
ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರ ಸಭೆಗಳಲ್ಲಿ ಸಾರ್ವಜನಿಕರಿಂದ ಗ್ರಂಥಾಲಯ ಕರ ಸಂಗ್ರಹಿಸಲಾಗುತ್ತದೆ. ಈ ಕರವನ್ನು ಪುಸ್ತಕ ಖರೀದಿಗೆ ಮತ್ತು ಗ್ರಂಥಾಲಯಗಳ ಅಭಿವೃದ್ಧಿಗೆ ಬಳಸಬೇಕು ಎಂಬುದು ನಿಯಮ. ಆದರೆ, ಸಂಗ್ರಹವಾದ ಹಣ ಪುಸ್ತಕ ಖರೀದಿಗೆ ವಿನಿಯೋಗವಾಗದಿರುವುದು ವಿಪರ್ಯಾಸ.
ಅಗತ್ಯ ಕ್ರಮಕ್ಕೆ ಆಗ್ರಹ
ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಾಹಿತ್ಯ ಮತ್ತು ಸಂಸ್ಕೃತಿಯ ಬಗೆಗೆ ಅಪಾರ ಕಾಳಜಿ ಹೊಂದಿರುವ ಸಚಿವರು ಈ ಕೂಡಲೇ ಮಧ್ಯ ಪ್ರವೇಶಿಸಬೇಕು. 2020-21ನೇ ಸಾಲಿನ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ 2022ನೇ ಸಾಲಿನಲ್ಲಿ ಆಯ್ಕೆಯಾದ ಪುಸ್ತಕಗಳನ್ನು ತಕ್ಷಣವೇ ಸಗಟು ಖರೀದಿಸಬೇಕು ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ.
ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಪ್ರತಿ ಶೀರ್ಷಿಕೆಯ 300 ಪ್ರತಿಗಳ ಖರೀದಿಯ ವ್ಯವಸ್ಥೆಯನ್ನು ಮರು ಸ್ಥಾಪಿಸಿ, ಲೇಖಕರು ಮತ್ತು ಪ್ರಕಾಶಕರ ಬದುಕಿಗೆ ಭರವಸೆ ನೀಡಬೇಕೆಂದು ಕನ್ನಡಿಗರು ಒತ್ತಾಯಿಸುತ್ತಿದ್ದಾರೆ.
ಸಂಪರ್ಕಕ್ಕೆ ಸಿಗದ ಅಧಿಕಾರಿಗಳು
ಪುಸ್ತಕ ಖರೀದಿ ಹಾಗೂ ಬಾಕಿ ಹಣದ ವಿಚಾರವಾಗಿ ಸಾಹಿತಿಗಳು ಮತ್ತು ಪ್ರಕಾಶಕರು ಗ್ರಂಥಾಲಯ ಇಲಾಖೆ ದೂರವಾಣಿಗೆ ಕರೆ ಮಾಡಿದರೆ, ಸ್ವೀಕರಿಸಲು ಸಿಬ್ಬಂದಿಯೇ ಇಲ್ಲದೆ ೆನ್‌ಗಳು ಕೇವಲ ರಿಂಗಣಿಸುತ್ತಿರುವುದು ಇಲಾಖೆ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಕಚೇರಿಯಲ್ಲಿ ಅಧಿಕಾರಿಗಳೇ ಇಲ್ಲವೇ? ಎಂಬ ಅನುಮಾನ ಮೂಡಿಸುವಷ್ಟು ಮೌನವಾಗಿರುವ ಇಲಾಖೆಯು, ಸಾಹಿತಿಗಳ ಅಹವಾಲುಗಳನ್ನು ಕೇಳುವ ಕನಿಷ್ಠ ಜವಾಬ್ದಾರಿಯನ್ನೂ ತೋರುತ್ತಿಲ್ಲ. ಕೂಡಲೇ ಇಲಾಖೆಯು ಎಚ್ಚೆತ್ತುಕೊಂಡು, ದೂರವಾಣಿ ಸಂಪರ್ಕವನ್ನು ಸಕ್ರಿಯಗೊಳಿಸುವ ಮೂಲಕ ಸಾಹಿತಿಗಳಿಗೆ ಸೂಕ್ತ ಮಾಹಿತಿ ನೀಡಬೇಕೆಂದು ಒತ್ತಾಯಿಸಲಾಗಿದೆ.
"
2020-21ನೇ ಸಾಲಿನ ಪುಸ್ತಕಗಳ ಖರೀದಿಗೆ ಸಂಬಂಧಿಸಿದ ಸಂಭಾವನೆ ಬಾಕಿ ಉಳಿದಿರುವುದು ಮತ್ತು 2022ರ ಪುಸ್ತಕಗಳನ್ನು ತರಿಸಿಕೊಳ್ಳುವಲ್ಲಿನ ವಿಳಂಬ ಧೋರಣೆ ಸಾಹಿತಿಗಳಲ್ಲಿ ಅಸಮಾಧಾನ ಮೂಡಿಸಿದೆ. ಕೂಡಲೇ ಬಾಕಿ ಹಣ ಪಾವತಿಸಿ, ಆಯ್ಕೆಯಾದ ಪುಸ್ತಕಗಳನ್ನು ತರಿಸಿಕೊಳ್ಳಲು ಇಲಾಖೆ ಕ್ರಮ ಕೈಗೊಳ್ಳಬೇಕು.
- ಕೆ.ಬಿ. ಮೋರಬ ಸಾಹಿತಿಗಳು ಬಾಗಲಕೋಟೆ