ಜಮಖಂಡಿ ನಗರ ಸಮೀಪದ ಕಡಪಟ್ಟಿಯಲ್ಲಿ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು. ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಇದ್ದರು. 
ಬಾಗಲಕೋಟೆ

ಧರ್ಮದ ಮಾರ್ಗದಿಂದಲೇ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ

ಜಮಖಂಡಿ: ಧರ್ಮದ ಮೂಲ ಉದ್ದೇಶ ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆ ಬೆಳೆಸುವುದಾಗಿದೆ. ಎಲ್ಲ ಧರ್ಮಗಳ ಜನರು ತಮ್ಮ ಆಚರಣೆಗಳನ್ನು ಪಾಲಿಸುತ್ತಾ ಪರಸ್ಪರ ಗೌರವದಿಂದ ಬದುಕಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ನಗರದಲ್ಲಿ ಅ. ೧೧ರಿಂದ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಸಮಾರೋಪ ಹಾಗೂ ವಿಜಯದಶಮಿ ಅಂಗವಾಗಿ ಬುಧವಾರ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ, ಶಮಿ ಪೂಜೆ ಸಲ್ಲಿಸಿ ಭಕ್ತರನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ವಿಜಯದಶಮಿ ದುಷ್ಟಶಕ್ತಿಗಳ ವಿರುದ್ಧ ದೈವಶಕ್ತಿ ಜಯಗಳಿಸಿದ ಪರ್ವವಾಗಿದೆ. ಅಧರ್ಮ ನಾಶವಾಗಿ ಧರ್ಮ ಉಳಿಯಬೇಕು ಎಂಬುದೇ ವಿಜಯ ದಶಮಿಯ ಮೂಲ ಸಂದೇಶ. ಧರ್ಮದಿಂದ ವಿಮುಖರಾದವರು ಮಾನವ ಜೀವನದ ಮೌಲ್ಯಗಳನ್ನು ಅರಿತು ನಡೆಯಬೇಕು. ಧರ್ಮದ ಮಾರ್ಗದಲ್ಲಿ ಸಾಗಿದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಜಮಖಂಡಿಯಲ್ಲಿ ಹತ್ತು ದಿನಗಳ ಕಾಲ ನಡೆದ ದಸರಾ ಧರ್ಮ ಸಮ್ಮೇಳನವು ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿಬಂದಿದೆ. ಶಾಸಕ ಜಗದೀಶ ಗುಡಗುಂಟಿ ಅವರ ನೇತೃತ್ವದಲ್ಲಿ ವಿವಿಧ ಸೇವಾ ಸಮಿತಿಗಳು, ಮಠಾಧೀಶರು, ಭಕ್ತರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಶ್ರಮಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಜಮಖಂಡಿಯಲ್ಲಿ ದಸರಾ ಮಹೋತ್ಸವದ ಸ್ಮರಣಾರ್ಥ ರೇಣುಕಾಚಾರ್ಯರ ದೇವಸ್ಥಾನ ನಿರ್ಮಾಣವಾದರೆ, ಮುಂದಿನ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಅನುಕೂಲವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ವಿವಿಧ ಮಠಗಳ ಶ್ರೀಗಳು ಮಹೋತ್ಸವದ ಯಶಸ್ಸಿಗೆ ಸಹಕರಿಸಿದ್ದಾರೆ. ಹನ್ನೊಂದು ದಿನಗಳ ಅನ್ನ ದಾಸೋಹದಲ್ಲಿ ಭಕ್ತರು ತೋರಿದ ಸೇವಾ ಮನೋಭಾವ ಇತರರಿಗೆ ಮಾದರಿಯಾಗಿದೆ ಎಂದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಜಮಖಂಡಿ ನಗರದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಸಹಾಯ ಸಹಕಾರ ನೀಡಿ ಸಮ್ಮೆಳನ ಯಶಸ್ವಿಗೆ ಶ್ರಮವಹಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.

ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ವಿವಿಧ ಮಠಾಧೀಶರು ಇದ್ದರು.