ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆ ಸಕ್ಕರೆ ಕಾರ್ಖಾನೆ ಮಾಲೀಕರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಕಬ್ಬಿನ ಬಾಕಿ ಪಾವತಿಸುವ ಕುರಿತು ಜಿಲ್ಲಾಽಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಎಸ್ಪಿ ಸಿದ್ಧಾರ್ಥ ಗೋಯಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಇತರರಿದ್ದರು. 
ಬಾಗಲಕೋಟೆ

ರೈತರಿಗೆ ಕಬ್ಬಿನ ಬಾಕಿ ಕೂಡಲೇ ಪಾವತಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ
  • ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ
ಬಾಗಲಕೋಟೆ: ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಬಾಕಿ ಉಳಿದಿರುವ ಬಿಲ್‌ನ್ನು ಶೀಘ್ರವಾಗಿ ಪಾವತಿಸಬೇಕು ಎಂದು ಸಂಬಂಧಿಸಿದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಪೂರೈಸಿದ ಕಬ್ಬಿನ ಹಣವನ್ನು ನಿಗದಿತ ಅವಧಿಯೊಳಗೆ ಪಾವತಿಸುವುದು ಕಾರ್ಖಾನೆಗಳ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಬಾಕಿ ಮೊತ್ತವನ್ನು ತ್ವರಿತವಾಗಿ ಪಾವತಿ ಮಾಡುವಂತೆ ಸೂಚಿಸಿ, ರೈತರ ಹಿತಾಶಕ್ತಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದರು.
ಸಕ್ಕರೆ ಕಾರ್ಖಾನೆಗಳು ಘೋಷಿಸಿದ ದರದಂತೆ ಕುಂದರಗಿ ಜೆಮ್ ಶುರ‍್ಸ್ ಮತ್ತು ಹಿರೇಪಡಸಲಗಿಯ ಜಮಖಂಡಿ ಶುರ‍್ಸ್ನವರು ಸೇರಿ ಒಟ್ಟು 13.74 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಹಣವನ್ನು ಪಾವತಿಗೆ ವಾರದ ಗುಡುವು ನೀಡಿದರು. ಅದೇ ರೀತಿ ಸರ್ಕಾರದಿಂದ ಪ್ರತಿ ಟನ್‌ಗೆ 50 ರೂ.ಗಳಂತೆ ನೀಡಲಾದ ಮೊತ್ತವನ್ನು ಶೇ.100ರಷ್ಟು ಕಾರ್ಖಾನೆಗಳು ರೈತರಿಗೆ ಪಾವತಿಸಿದ್ದು, ಕಾರ್ಖಾನೆಯಿಂದ ಪ್ರತಿ ಟನ್‌ಗೆ 50 ರೂ.ಗಳಂತೆ 5 ಕಾರ್ಖಾನೆಗಳು ಮೊತ್ತ ಪಾವತಿಸಿದ್ದಾರೆ. 9 ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದು, ತುರ್ತಾಗಿ ಪಾವತಿಗೆ ಮುಂದಾಗಬೇಕು ಎಂದು ತಿಳಿಸಿದರು.
ಉಂಟಾಗುವ ಹವಾಮಾನದ ವೈಪರಿತ್ಯ ಹಾಗೂ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸಸಿ ನೆಡುವ ಆಂದೋಲನವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಈಗಾಗಲೆ ಜಿಲ್ಲೆಯಲ್ಲಿರುವ ವಿವಿಧ ಸಕ್ಕರೆ ಕಾರ್ಖಾನೆಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅರಣ್ಯ ಇಲಾಖೆಯವರು ಗುರುತಿಸಿದ ಸ್ಥಳಗಳಲ್ಲಿ ಪ್ರತಿ ಸಕ್ಕರೆ ಕಾರ್ಖಾನೆಗಳು ತಲಾ 10 ಸಾವಿರದಂತೆ ಸಸಿಗಳನ್ನು ನೆಡಲು ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಖಾನೆಗಳು ಒಂದೊಂದು ಸಾವಿರ ಗಿಡಗಳನ್ನು ನೆಟ್ಟಿದ್ದು, ಈ ಪ್ರಕ್ರಿಯೆ ಮುಂದುವರಿಸಿ ತಮಗೆ ನಿಗದಿಪಡಿಸಿದ ಗುರಿಯನ್ನು ತಲುಪಲು ತಿಳಿಸಿ, ಸರ್ಕಾರಿ ಶಾಲಾ-ಕಾಲೇಜುಗಳ ಆವರಣದಲ್ಲಿ ಸಸಿಗಳನ್ನು ನೆಡಲು ಜಿಲ್ಲಾಽಕಾರಿಗಳು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹೀರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಸೇರಿ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ವ್ಯವಸ್ಥಾಪನ ಮಂಡಳಿಯ ಪ್ರತಿನಿಽಗಳು ಉಪಸ್ಥಿತರಿದ್ದರು.