ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೈಕ್ರೋ ಅಬ್ಸರ್ವರ್‌ಗಳಿಗೆ ಜಿಲ್ಲಾ ಪಂಚಾಯಿತಿ ನೂತನ ಸಭಾ ಭವನದಲ್ಲಿ ಮಂಗಳವಾರ ನಡೆದ ತರಬೇತಿಯಲ್ಲಿ ಸಾಮಾನ್ಯ ವೀಕ್ಷಕಿ ಪಾರುಲ್ ಪಟವಾರಿ ಮಾತನಾಡಿದರು. ಜಿಲ್ಲಾಧಿಕಾರಿ ಸಂಗಪ್ಪ ಮತ್ತಿತರರು ಇದ್ದರು.
- ಸಾಮಾನ್ಯ ವೀಕ್ಷಕಿ ಪಾರುಲ್ ಪಟವಾರಿ ಸೂಚನೆ
- ಮೈಕ್ರೋ ಅಬ್ಸರ್ವರ್‌ಗಳಿಗೆ ತರಬೇತಿ ಕಾರ್ಯಾಗಾರ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ನೇಮಕಗೊಂಡ ಮೈಕ್ರೋ ಅಬ್ಸರ್ವರ್‌ಗಳಿಗೆ ಜಿಲ್ಲಾ ಪಂಚಾಯಿತಿ ನೂತನ ಸಭಾ ಭವನದಲ್ಲಿ ಮಂಗಳವಾರ ತರಬೇತಿ ಕಾರ್ಯಾಗಾರ ಜರುಗಿತು.
ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಸಾಮಾನ್ಯ ವೀಕ್ಷಕಿ ಪಾರುಲ್ ಪಟವಾರಿ, ಮೈಕ್ರೋ ಅಬ್ಸರ್ವರ್‌ಗಳ ಕರ್ತವ್ಯಗಳು ಹಾಗೂ ಜವಾಬ್ದಾರಿಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇವಿಎಂ ಹಾಗೂ ವಿವಿಪ್ಯಾಟ್ ಉಪಕರಣಗಳ ಕಾರ್ಯಾಚರಣೆ, ಮಾದರಿ ಮತದಾನ, ಮತದಾನದ ಆರಂಭ ಮತ್ತು ಅಂತ್ಯದ ಕ್ರಮಗಳ ಬಗ್ಗೆ ತಿಳಿಸಿದರು.
ಮತದಾನ ಪ್ರಾರಂಭದ ಮುಂಚೆಯೇ ನಿಯೋಜಿತ ಮತಗಟ್ಟೆಯಲ್ಲಿ ಹಾಜರಿದ್ದು, ಅಣಕು ಮತದಾನದ ಪ್ರಕ್ರಿಯೆಯನ್ನು ನಿಗಾವಹಿಸಬೇಕು. ಮತದಾನ ಆರಂಭದಿಂದ ಮುಕ್ತಾಯ ಆಗುವವರೆಗೆ ಹಾಜರಿದ್ದು, ಪ್ರತಿ ಹಂತದ ಮತದಾನದ ಪ್ರಕ್ರಿಯೆಯ ಮೇಲೆ ನಿಗಾವಹಿಸಿ, ಪ್ರತಿಹಂತದ ವಿವರಗಳನ್ನು ದಾಖಲಿಸಬೇಕು. ಮುಕ್ತ, ನ್ಯಾಯ ಸಮ್ಮತ ಸುಸೂತ್ರ ಚುನಾವಣೆಗಾಗಿ ಕಾರ್ಯನಿರ್ವಹಿಸಿ, ಚುನಾವಣಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯಾವುದೇ ಸಮಸ್ಯೆಗಳು ಎದುರಾದರೂ ತಮ್ಮನ್ನು ಸೇರಿ ಜಿಲ್ಲಾ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಲು ಹೇಳಿದರು.
ಯಾವುದೇ ಅಕ್ರಮ ಅಥವಾ ಅಸಮಂಜಸ ಚಟುವಟಿಕೆಗಳನ್ನು ತಕ್ಷಣವೇ ವರದಿ ಮಾಡಬೇಕು. ಜೊತೆಗೆ ಟೆಂಡರ್ ಓಟ, ಚಾಲೆಂಜಿಂಗ್ ವೋಟ್ ಹಾಗೂ ಇತರ ವಿಶೇಷ ಪರಿಸ್ಥಿತಿಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಮತದಾರರ ಗುರುತು ಪರಿಶೀಲನೆ, ಮತಗಟ್ಟೆಯ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಮೈಕ್ರೋ ಅಬ್ಸರ್ವರ್‌ಗಳು ತಮಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಅದಕ್ಕಾಗಿ ತರಬೇತಿ ನೀಡಲಾಗುತ್ತಿದ್ದು, ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತರಬೇತಿದಾರರಾದ ಸಂಗಮೇಶ ಸಣತಂಗಿ, ಮತದಾನ ದಿನದಂದು ಮತಗಟ್ಟೆಗಳಲ್ಲಿ ಅನುಸರಿಸಬೇಕಾದ ಪಾತ್ರದ ಜೊತೆಗೆ ಮತಗಟ್ಟೆಗಳಲ್ಲಿ ಯಾರು ಬರಬೇಕು. ಯಾರು ಬರಬಾರದು ಎಂಬುದರ ಬಗ್ಗೆ ವಿವರವಾಗಿ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಇದರ ಜತೆಗೆ ಸಾಮಾನ್ಯ ವೀಕ್ಷಕರು ಕಿವಿ, ಕಣ್ಣುಗಳಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.