ಬಾಗಲಕೋಟೆ ಪ್ರೆಸ್ ಕ್ಲಬ್ ಆವರಣದಲ್ಲಿ ಬುಧವಾರ ರಾತ್ರಿ ಕಾನಿಪ ವತಿಯಿಂದ ಆಯೋಜಿಸಿದ್ದ ಹಲಗಿ ಮಜಲಿಗೆ ಜಿಲ್ಲಾಧಿಕಾರಿ ಸಂಗಪ್ಪ ಹಲಿಗೆ ಬಾರಿಸುವ ಮೂಲಕ ಚಾಲನೆ ನೀಡಿದರು. ಜಿಪಂ ಸಿಇಒ ಶಶಿಧರ ಕುರೇರ, ಪತ್ರಕರ್ತರಾದ ಈಶ್ವರ ಶೆಟ್ಟರ, ಮಹೇಶ ಅಂಗಡಿ, ಕಳಕಪ್ಪ ಬಾದವಾಡಗಿ, ಮಹಾಬಳೇಶ್ವರ ಗುಡಗುಂಟಿ, ಸಂಜು ವಾಡ್ಕರ್, ಜಗದೀಶ ಗಾಣಗೇರ ಸಾಥ್ ನೀಡಿದರು.
- ಜಿಲ್ಲಾಧಿಕಾರಿ ಸಂಗಪ್ಪ ಹೇಳಿಕೆ
- ಕಾನಿಪದಿಂದ ಹಲಗೆ ಮಜಲು ಕಾರ್ಯಕ್ರಮ
ಬಾಗಲಕೋಟೆ: ದೇಶದಲ್ಲಿ ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಬಾಗಲಕೋಟೆ ಹೋಳಿ ಹಬ್ಬದ ಹಲಗೆ ಮಜಲನ್ನು ಉಳಿಸಿ ಬೆಳೆಸುವಂತಹ ಕೆಲಸ ಬಾಗಲಕೋಟೆಯ ಜನರಿಂದ ಆಗಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತ ದಿ.ಪ್ರಕಾಶ ಗುಳೇದಗುಡ್ಡ ವೇದಿಕೆಯಲ್ಲಿ ಬುಧವಾರ ರಾತ್ರಿ ನಡೆದ ಹಲಗೆ ಮಜಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲ ವರ್ಗದವರು ಹೋಳಿ ಹಬ್ಬವನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಹಬ್ಬದ ಪರಂಪರೆಯನ್ನು ತಿಳಿಸಿಕೊಡಬೇಕಾಗಿದೆ. ಹೋಳಿ ಹಬ್ಬವನ್ನು ಎಲ್ಲರೂ ಸಹೋದರರಂತೆ ಸ್ನೇಹಮಯವಾಗಿ ಆಚರಿಸಬೇಕು. ದುಷ್ಟ ಶಕ್ತಿಗಳು ಹೋಗಬೇಕು. ಒಳ್ಳೆಯ ವಿಚಾರ ಎಲ್ಲರಲ್ಲಿ ಬರಬೇಕು. ಅಹಂಕಾರ ನಾಶ ಮಾಡುವುದು ಹೋಳಿ ಹಬ್ಬದ ಪ್ರತೀಕವಾಗಿದೆ. ಕೆಂಪು ಬಣ್ಣ ಶೌರ್ಯ, ಹಸಿರು ಸಮೃದ್ಧಿ, ನೀಲಿ ವಿಶ್ವಾಸ, ಹಳದಿ ಆನಂದವನ್ನು ಉಂಟು ಮಾಡುತ್ತದೆ. ಪತ್ರಕರ್ತರು ಬಾಗಲಕೋಟೆಯ ಜನತೆಯ ಜತೆಗೆ ಹೋಳಿ ಹಬ್ಬವನ್ನು, ಹಲಗೆ ಮಜಲು ಆಚರಿಸುವುದು ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮಾತನಾಡಿ, ಹಬ್ಬಗಳೆಂದರೆ ನಮ್ಮ ಸಂಸ್ಕೃತಿಯ ಪ್ರತಿಬಿಂಬಿಸುತ್ತವೆ. ನಮ್ಮಲ್ಲಿರುವ ಸಾಮರಸ್ಯವನ್ನು, ಸಂತಸವನ್ನು ಹಾಗೂ ಸಮಾಜದಲ್ಲಿ ಒಳ್ಳೆಯ ಬಾಳ್ವೆ ಮಾಡಲು ಹಬ್ಬಗಳು ದೇಶದಲ್ಲಿ ಆಚರಣೆಯಲ್ಲಿವೆ. ಹಬ್ಬಗಳ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ನಮ್ಮಲ್ಲಿ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿ, ಸಂತೋಷದಿಂದ ಇರುವಂತೆ ನಮ್ಮ ಹಬ್ಬಗಳು ಮಾಡುತ್ತವೆ. ನಮ್ಮಲ್ಲಿರುವ ತಪ್ಪುಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ನಾವು ಮಾಡಿದ ತಪ್ಪುಗಳನ್ನು ಮರೆತು ಹೋಗಲು ಹೋಳಿ ಹಬ್ಬವನ್ನು ಆಚರಿಸುತ್ತೆವೆ. ಕಾಮಕ್ರೋಧ, ಮದ, ಮತ್ಸರ, ಲೋಭಗಳನ್ನು ಸುಟ್ಟು ಹಾಕಿ ಯೊಸ ಯುಗ ಪ್ರಾರಂಭ ಮಾಡಲು ಹೋಳಿ ಹಬ್ಬ ಆಚರಿಸುವ ಪ್ರತೀತಿ ಇದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಸಾಮಾರಸ್ಯದಿಂದ ಎಲ್ಲ ಸಮಾಜವನ್ನು ಒಳಗೊಂಡು ಆಚರಣೆ ಮಾಡುವ ಹಬ್ಬ ಹೋಳಿಯಾಗಿದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಇದ್ದು ಎಲ್ಲರೂ ಹಬ್ಬವನ್ನು ಉತ್ಸಾಹದಿಂದ ಆಚರಿಸಬೇಕು. ಯಾರೂ ಶಾಂತಿಗೆ ಭಂಗವನ್ನು ಉಂಟು ಮಾಡದೇ ಹಬ್ಬ ಆಚರಿಸಬೇಕು. ಅಹಿತಕರ ಘಟನೆ ನಡೆಸುವವರ ಮೇಲೆ ಪೊಲೀಸ್ ಇಲಾಖೆ ಸದಾ ಕಣ್ಣು ಇಟ್ಟಿರುತ್ತದೆ. ಶಾಂತಿ ಸುವ್ಯವಸ್ಥೆ ನೆಲೆಸಲು ಇಲಾಖೆಯೊಂದಿಗೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಈಶ್ವರ ಶೆಟ್ಟರ ಮಾತನಾಡಿ, ಬಾಗಲಕೋಟೆ ಹೋಳಿ ಹಬ್ಬವನ್ನು ಜಾತಿ, ಮತ, ಬೇಧಭಾವ ಇಲ್ಲದೆ ಎಲ್ಲರೂ ಒಗ್ಗೂಡಿಕೊಂಡು ಸೌಹಾರ್ದತೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹೋಳಿ ಹಬ್ಬಕ್ಕೆ ಬಾಗಲಕೋಟೆಯಲ್ಲಿ ತನ್ನದೇಯಾದ ವೈಶಿಷ್ಯತೆ ಇದ್ದು ಇದನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾನಿಪ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಅಂಗಡಿ ಮಾತನಾಡಿ, ಹಿರಿಯ ಪತ್ರಕರ್ತ ದಿ.ರಾಮ ಮನಗೂಳಿಯವರು ಹೋಳಿ ಹಬ್ಬವನ್ನು ಉಳಿಸಿಕೊಂಡು ಹೋಗಲು ಬಾಗಲಕೋಟೆಯ ಜನತೆಯ ಜತೆಗೆ ಪತ್ರಕರ್ತರು ಆಚರಿಸಿಕೊಂಡು ಹೋಗಬೇಕು ಎಂದು ಭದ್ರಬುನಾದಿಯನ್ನು ಹಾಕಿಕೊಟ್ಟರು. ಅವರಂತೆ ಈ ಹಬ್ಬವನ್ನು ಪತ್ರಕರ್ತರೆಲ್ಲರೂ ಸೇರಿಕೊಂಡು ಆಚರಿಸುತ್ತಿದ್ದೇವೆ ಎಂದರು.
ಹೋಳಿ ಆಚರಣಾ ಸಮಿತಿಯ ಕಳಕಪ್ಪ ಬಾದವಾಡಗಿ, ಮಹಾಬಳೇಶ್ವರ ಗುಡಗುಂಟಿ, ಸಂಜು ವಾಡ್ಕರ್, ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ, ಮಂಜುನಾಥ ತಳವಾರ, ಕೃಷ್ಣಾ ಹಾದಿಮನಿ ಮತ್ತಿತರರು ವೇದಿಕೆಯಲ್ಲಿ ಇದ್ದರು.