ಹುನಗುಂದ ತಾಲೂಕಿನ ಯಡಹಳ್ಳಿ ಗ್ರಾಮದ ರೈತರು ಭೂಮಿಗೆ ಪರಿಹಾರ ಹಣ ನೀಡಿವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟಿಸಿದರು. ರೈತರಾದ ನಾಗಪ್ಪ ಬೀಳಗಿ, ಮಲ್ಲನಗೌಡ ಗೌಡರ, ಅಂದನಗೌಡ ಗೌಡರ, ನಿಂಗನಗೌಡ ಗೌಡರ, ತಹಸೀಲ್ದಾರ್ ಪ್ರದೀಪ ಹಿರೇಮಠ, ಪಿಎಸ್‌ಐ ಎಸ್.ಜಿ.ಆಲದಕಟ್ಟಿ ಇದ್ದರು.
- ಕಾಮಗಾರಿ ತಡೆದು ಪ್ರತಿಭಟಿಸಿದ ರೈತರು
- ಯಡಹಳ್ಳಿ ಗ್ರಾಮದಲ್ಲಿ ಘಟನೆ
- ಹೈದ್ರಾಬಾದ-ಪಣಜಿ ರಾಷ್ಟ್ರೀಯ ಹೆದ್ದಾರಿ
ಹುನಗುಂದ: ಹೈದ್ರಾಬಾದ-ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ಹಣ ನೀಡದೇ ಕಾಮಗಾರಿ ಆರಂಭಿಸಿದಕ್ಕೆ ತಾಲೂಕಿನ ಯಡಹಳ್ಳಿ ಗ್ರಾಮದ ರೈತರು ಬುಧವಾರ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಡಹಳ್ಳಿ ಗ್ರಾಮದ ರೈತ ಶಿವನಗೌಡ ಪಾಟೀಲ ಮಾತನಾಡಿ, ಕಳೆದ ಎರಡು ವರ್ಷದಿಂದ ಹೈದ್ರಾಬಾದ್-ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನಮ್ಮ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ ಜಮೀನಿನ ರೈತರಿಗೆ ಇದುವರೆಗೂ ಯಾವುದೇ ಹಣ ನೀಡಿಲ್ಲ. ಆದರು ಸಹ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಗ್ರಾಮದ 28ಕ್ಕೂ ಹೆಚ್ಚು ರೈತರಿಗೆ ಇದೂವರೆಗೂ ಪರಿಹಾರ ಹಣ ಬಂದಿಲ್ಲ. ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಪರಿಹಾರ ವಿತರಣೆಯಲ್ಲಿ ಹೆದ್ದಾರಿ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಕಿಡಿಕಾರಿದರು.
ಹೆದ್ದಾರಿ ಕಾಮಗಾರಿ ತಡೆದ ಹಿನ್ನಲೆಯಲ್ಲಿ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಅಗಮಿಸಿ ಕಾಮಗಾರಿಗೆ ತಡೆ ನೀಡಿದ ರೈತರ ಸಮಸ್ಯೆ ಆಲಿಸಿದರು. ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ೆ.2 ರೊಳಗಾಗಿ ಪರಿಹಾರ ಬರುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಾಯಕ ಇಂಜಿನಿಯರ್ ರಾಜು ಅಂಗಡಿ ಮಾತನಾಡಿ, ಕಡಿಮೆ ಪರಿಹಾರ ಬಂದಿದೆ ಎಂದು ಕೆಲವು ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಜತೆಗೆ ಕೆಲವು ರೈತರ ದಾಖಲೆಗಳು ಹೊಂದಾಣಿಕೆ ಆಗಿಲ್ಲ. ೆ.2 ಒಳಗಾಗಿ ರೈತರಿಗೆ ಪರಿಹಾರ ಹಣ ಜಮಾ ಮಾಡುವಂತೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರಾದ ನಾಗಪ್ಪ ಬೀಳಗಿ, ಮಲ್ಲನಗೌಡ ಗೌಡರ, ಅಂದನಗೌಡ ಗೌಡರ, ನಿಂಗನಗೌಡ ಗೌಡರ, ಬಸಲಿಂಗಪ್ಪ ಗೌಡರ, ಶರಣಗೌಡ ಅರಸಿಬಿಡಿ, ಸಂಗನಗೌಡ ಗೌಡರ, ಬಸನಗೌಡ ಅರಸಿಬಿಡಿ, ಮಹಾಂತೇಶ ಅರಸಿಬೀಡಿ, ರಾಮನಗೌಡ ಪಾಟೀಲ ಇದ್ದರು.